ಸ್ಟೇಟಸ್ ಕತೆಗಳು (ಭಾಗ ೧೨೧೪) - ಆಹಾರೋತ್ಸವ

ಜೆಸಿಬಿ ದೊಡ್ಡ ಯಂತ್ರದ ಕೊಕ್ಕೆ ನೆಲಕ್ಕೆ ಬಡಿಯುವಾಗ ತನ್ನ ಮುಂದೆ ಹಲವು ವರ್ಷದಿಂದ ನಿಂತಿದ್ದ ಎಲ್ಲ ಸಣ್ಣ ಪುಟ್ಟ ಅಂಗಡಿಗಳನ್ನ ಮುರಿದು ನೆಲಸಮ ಮಾಡಿತ್ತು.ನಗರ ಸ್ವಚ್ಚವಾಗಬೇಕು, ಬೀದಿ ಬದಿಯ ವ್ಯಾಪಾರಸ್ಥರಿಗೆ ಪ್ರತ್ಯೇಕ ಸುಸಜ್ಜಿತವಾದ ಸ್ಥಳಾವಕಾಶ ನೀಡುತ್ತೇವೆ ಅನ್ನೋದು ಊರಿನ ದೊಡ್ಡವರಿಂದ ಬಂದ ಮಾತು, ಹೇಳಿದ ನಂತರ ಊರು ಹಲವು ತಿಂಗಳ ಸೂರ್ಯೋದಯವನ್ನು ಕಂಡಿದೆ. ಮಾತಿನಲ್ಲಿ ನಿಂತವರು ಕೆಲಸದಲ್ಲಿ ಜಾರಿದ್ದರು.
ತಮ್ಮೂರು ಆಕರ್ಷಣೆಯ ಕೇಂದ್ರ ಬಿಂದುವಾಗಬೇಕು ಹಲವು ಜನ ಈ ಊರಿಗೆ ಭೇಟಿ ನೀಡಬೇಕು ಅನ್ನುವ ಕಾರಣಕ್ಕೆ ಆಹಾರ ಉತ್ಸವವನ್ನು ಆಯೋಜಿಸಿದರು. ಮತ್ತದೇ ಬೀದಿ ಬದಿಯಲ್ಲಿ ದೊಡ್ಡ ಮನುಷ್ಯರ ದೊಡ್ಡ ಅಂಗಡಿಗಳು ದೊಡ್ಡ ರೂಪದಲ್ಲಿ ತೆರೆದು ನಿಂತವು. ಉದ್ಘಾಟನೆಗೆ ಪರವೂರಿನ ಚಹಾ ಮಾಡುವವ ಆಗಮಿಸಿಯೇ ಬಿಟ್ಟ. ಅದೇ ಮಣ್ಣಿನ ಕೆಳಗೆ ಜೆಸಿಬಿ ಮುಚ್ಚಿದ ಚಹಾದ ಲೋಟಗಳಿವೆ, ಬದುಕಿನ ಆಸೆ ಕನಸುಗಳಿವೆ. ಕಣ್ಣೀರ ಹನಿಗಳಿವೆ, ನೋವಿನ ಮಾತುಗಳಿವೆ. ಊರಿನವರ ಅಡುಗೆಯ ಸಾಧನೆಗಳು, ವಿಶೇಷ ತಿಂಡಿ ತಿನಿಸುಗಳಿಗೆ ಹೆಸರು ವಾಸಿಯಾದ ನಮ್ಮೂರಿನ ಪ್ರಸಿದ್ದಿ ಬಯಸದ ಎಲೆಮರೆಯ ಕಾಯಿಗಳು ಇನ್ನೂ ಮರೆಯಲ್ಲೇ ಉಳಿದು ಬಿಟ್ಟಿದ್ದಾರೆ. ಯಾವುದೋ ಊರಿನ ಕೆರೆಯ ನೀರನ್ನು ನಮ್ಮೂರಿಗೆ ಹರಿಸೋಕೆ ಪರಿಶ್ರಮ ಪಟ್ವವರಿಗೆ ಊರಿನ ನದಿಗಳು ನೆನಪಾಗಲೇ ಇಲ್ಲ. ಇನ್ನೂ ಬದುಕಿನ ಅವಕಾಶಕ್ಕೆ ನಂಬಿಕೆಯ ಸೂರ್ಯೋದಯಕ್ಕೆ ಕಾಯುತ್ತಿವೆ ಪುಟ್ಟ ಅಂಗಡಿಗಳು…
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ