ಸ್ಟೇಟಸ್ ಕತೆಗಳು (ಭಾಗ ೧೨೧೫) - ಕಣ್ಣು

ಬದುಕೊಂದು ಬೀದಿಗೆ ಬಿದ್ದಿದೆ. ಅಬ್ಬರದ ಬೆಳಕು ಕಾಣದೆ, ಆ ದಿನದ ದುಡಿಮೆಯನ್ನೇ ನಂಬಿಕೊಂಡಿರುವ ಬದುಕಿಂದು ಭಯದಲ್ಲಿ ಮೂಲೆ ಸೇರಿದೆ. ಕ್ಯಾಮರಾ ಕಣ್ಣಿಗೆ ಬಿದ್ದ ಕಣ್ಣುಗಳು ಹೆಚ್ಚು ಕ್ಯಾಮರಾವನ್ನ ತನ್ನತ್ತ ಸೆಳೆಯುವಂತೆ ಮಾಡಿ ಕಣ್ಣೀರು ಇಳಿಸಿದೆ. ಮುಗ್ದತೆಯ ಲೋಕದೊಳಗೆ ಕ್ರೌರ್ಯತೆಯು ಕಾಲಿಟ್ಟು ಬದುಕಿನ ಇನ್ನೊಂದು ಮಗ್ಗುಲನ್ನು ಪರಿಚಯಿಸಿಬಿಟ್ಟಿದೆ. ಸಂಗಮಕ್ಕೆ ಸಾಕ್ಷಿ ಆಗಬೇಕಾದ ಜನರ ಕಣ್ಣುಗಳಿಗೆ ಮುಗ್ದ ಮುಖದ ತೇಜೋ ಪುಂಜ ಕಣ್ಣುಗಳು ಮಾತ್ರ ಕಾಣುತ್ತಿವೆ. ಕಣ್ಣಿನ ಹಿಂದಿನ ನೋವು ಅದರ ಯಾತನೆ ಭಾವನೆಗಳ ಅರಿವು ಯಾರಿಗೂ ಕಾಣುತ್ತಿಲ್ಲ. ಸೆಳೆಯುವ ಕಣ್ಣುಗಳಿಂದ ಲಾಭ ಪಡೆದುಕೊಳ್ಳೋಕೆ ಹೊರಟವರು ಅವಳ ಬದುಕಿನ ಮುಂದಿನ ದಾರಿಯ ಬಗ್ಗೆ ಯೋಚಿಸಲೇ ಇಲ್ಲ. ದಿನದ ಒಪ್ಪೊತ್ತಿನ ಊಟಕ್ಕೂ ಕಷ್ಟಪಡುವ ಸ್ಥಿತಿಗೆ ತಳ್ಳುವಂತಹ ಎಲ್ಲ ಕೆಲಸಗಳು ಅಲ್ಲಿ ನಡೆಯಲಾರಂಭಿಸಿದೆ.ಒಟ್ಟಿನಲ್ಲಿ ಬದುಕೊಂದನ್ನ ಬೀದಿಗೆ ತಳ್ಳಿ ಹಸಿವೆಗಾಗಿ ಎಲ್ಲರ ಮುಂದೆ ಕೈ ಒಡ್ಡುವಂತೆ ಮಾಡುವವರೆಗೂ ನೆಮ್ಮದಿ ಇಲ್ಲದ ಅವಿರತ ಕೆಲಸವೂ ಸಾಗುತ್ತಿದೆ. ತುಂಬಾ ಎಚ್ಚರಾ ...ಲೋಕಕ್ಕೆ ತನ್ನ ಹೊಟ್ಟೆ ತುಂಬಿದರೆ ಸಾಕು ನಿನ್ನ ಹೊಟ್ಟೆಯ ಬಗ್ಗೆ ಗಮನಹರಿಸುವವರು ಯಾರು ಇಲ್ಲ...
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ