ಸ್ಟೇಟಸ್ ಕತೆಗಳು (ಭಾಗ ೧೨೧೬) - ಬದುಕು

ಸ್ಟೇಟಸ್ ಕತೆಗಳು (ಭಾಗ ೧೨೧೬) - ಬದುಕು

ಬದುಕು ಅದ್ಭುತವಾಗಿದೆ. ಅಂದುಕೊಂಡ ಕನಸುಗಳೆಲ್ಲವೂ ನನಸಾಗುವ ಹಾದಿಯತ್ತ ಸಾಗಿದೆ. ಸಣ್ಣ ಪುಟ್ಟ ಹೆಜ್ಜೆಗಳಲ್ಲಿ ಸಂಭ್ರಮ ಮನೆ ಮಾಡಿದೆ. ಪ್ರೀತಿಸುವ ಹೃದಯವಿಂದು ಜೊತೆ ನಿಂತು ಸಾಗಿದೆ. ಮಾತುಗಳಿಗೆ ಮೌಲ್ಯ ಸಿಗುತ್ತಿದೆ, ಹೆಜ್ಜೆ ಇಟ್ಟು ಹೊಸತನದ ಶ್ರಮ ಮೂಡಿಸುವ ಕೆಲಸಗಳೆಲ್ಲವೂ ಗೆಲುವನ್ನು ಕಾಣುತ್ತಿವೆ. ಸಸಿ ನೆಟ್ಟು ನೀರೆರೆದು ಮರವಾಗಿ ಬೆಳೆಸಿದ್ದಕ್ಕೆ ಹೂ ಬಿಟ್ಟು ಹಣ್ಣು ಕೊಡುವ ಫಲವಿಂದು ಕಣ್ಣ ಮುಂದೆ ಕಾಣುತ್ತಿದೆ. ಒಣಗಿದ ನೆಲದ ಮೇಲೆ ನೀರ ಸಿಂಚನ ಮೂಡಿದೆ. ಬಾಯಾರಿದವನಿಗೆ ತಂಪೆರೆಯುವ ನೀರು ಕಣ್ಣ ಮುಂದೆ ನಿಂತಿದೆ. ಬದುಕು ಅದ್ಭುತವಾಗಿದೆ. ಬದುಕು ಸುಂದರವಾಗಿದೆ. ಸಿಕ್ಕ ಸಣ್ಣ ವಿಚಾರಗಳನ್ನ ಅನುಭವಿಸುತ್ತಾ ಸಂತೋಷ ಪಡುವ ಮನಸ್ಸಿಂದು ಉಲ್ಲಸಿತಗೊಂಡಿದೆ. ಕಳೆದುಕೊಳ್ಳುವುದಕ್ಕೆ ಏನೂ ಇಲ್ಲ .ಎಲ್ಲವೂ ಪಡೆದುಕೊಳ್ಳುವುದಷ್ಟೇ ಅನ್ನುವ ಮನಸ್ಸು ಈಗ ತುಂಬಾ ಸಂಭ್ರಮದಿಂದ ಇನ್ನೊಂದಷ್ಟು ಹೊಸತನವನ್ನು ಕಾಣುವುದಕ್ಕೆ ಕಾಯುತ್ತಿದೆ. ಹೌದು ನನ್ನ ಬದುಕೀಗ ಸುಂದರವಾಗಿದೆ ಈ ಯೋಚನೆಯಲ್ಲಿ ಸಾಗುತ್ತಿದ್ದವನ ಮುಖದಲ್ಲಿ ಒಂದು ದಿನವೂ ನಗು ಕಡಿಮೆಯಾಗಿಲ್ಲ ಕಣ್ಣುಗಳಲ್ಲಿ ಕಾಂತಿಯ ತೀಕ್ಷ್ಣತೆ ಸೋರಿ ಹೋಗಿಲ್ಲ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ