ಸ್ಟೇಟಸ್ ಕತೆಗಳು (ಭಾಗ ೧೨೧೭) - ಇಂದು

ಸ್ಟೇಟಸ್ ಕತೆಗಳು (ಭಾಗ ೧೨೧೭) - ಇಂದು

ತಿಂಗಳಂತ್ಯಕ್ಕಾಗುವಾಗ ಕಿಸೆ ಪಿಸುಗುಟ್ಟುವುದಕ್ಕೆ ಆರಂಭ ಮಾಡುತ್ತೆ. ಆದರೂ ಆತ ನಗುತ್ತಿದ್ದಾನೆ. ಕಣ್ಣಿನ ಆಸೆಗಳೆಲ್ಲವೂ ಕಣ್ಣಿನೊಳಗೆ ಇಂಗಿ ಹೋಗುತ್ತೆ, ಆದರೂ ಆತ ಎದೆಗುಂದೋದಿಲ್ಲ ಭಯಪಡುವುದಿಲ್ಲ ಮುಖದಲ್ಲಿ ನಗುವ ತಂದುಕೊಂಡು ಹೊರಡ್ತಾನೆ. ಒಂದಷ್ಟು ಆಸೆಗಳ ಪಟ್ಟಿಗಳು ಅದರಲ್ಲಿ ಸಣ್ಣ ಸಣ್ಣ ಆಸೆಗಳನ್ನ ಈಡೇರಿಸಿಕೊಂಡು ಮುಂದೊಂದು ದಿನ ಖಂಡಿತವಾಗಿಯೂ ದೊಡ್ಡ ಆಸೆಗಳನ್ನು ಸಾಧಿಸ್ತೇನೆ ಅನ್ನುವ ನಂಬಿಕೆಯಿಂದ ಬದುಕನ್ನ ಸಾಗಿಸುತ್ತಾನೆ. ಒಳ್ಳೆಯದಾಗುತ್ತೆ ಅನ್ನುವ ನಂಬಿಕೆಯೊಂದೇ ಆತನನ್ನ ನಿನ್ನೆಯಿಂದ ಇಂದಿಗೆ ದಾಟಿಸಿದೆ. ನಿನ್ನೆಯ ಬದುಕು ಇಂದಿಗೆ, ಇಂದಿನದ್ದು ಪ್ರೇರಣೆ ನಾಳೆಗೆ. ಎಲ್ಲರನ್ನ ಪ್ರೀತಿಸ್ತಾ ಆ ದಿನದ ಬದುಕಿಗೆ ಮುಖ್ಯವಾಗಿರುವುದನ್ನ ಮಾತ್ರ ಕೇಳಿ ಪಡೆದುಕೊಂಡು ದಿನ ದೂಡುತ್ತಿದ್ದಾನೆ. ಒಂದು ದಿನವೂ ಹೆಜ್ಜೆ ಹಿಂದಿಟ್ಟಿಲ್ಲ. ಸೋಲು ಕಣ್ಣ ಮುಂದೆ ಬಂದು ನಿಂತು ಒಮ್ಮೆ ತಲೆ ಕೆಳಗೆ ಹಾಕು ಒಂದಷ್ಟು ದಿನವಾದ ಮೇಲೆ ಮತ್ತೆ ಗೆಲುವನ್ನ ನಿನ್ನ ಜೊತೆಗೆ ನಾ ಕಳುಹಿಸಿ ಕೊಡುತ್ತೇನೆ ಅಂತಂದ್ರೂ ಕೂಡ ಆತ ಸೋಲನ್ನ ವಾಪಸ್ಸು ಕಳುಹಿಸಿ ಗೆಲುವನ್ನು ಹುಡುಕ ಹೊರಟಿದ್ದಾನೆ. ಸ್ವಾಭಿಮಾನ ಕಳೆದುಕೊಂಡಿಲ್ಲ ಕತ್ತಲಾದಾಗ ಕಣ್ಣೀರು ಕಣ್ಣಂಚಲಿ ಬಂದರೂ ಅಲ್ಲೇ ಒರೆಸಿಕೊಂಡು ಕೆಳಗಿಳಿಯದಂತೆ ನೋಡುತ್ತಾನೆ. ಮುಖದ ಮೇಲಿನ ನಗು ಮಾಯದಂತೆ ಕಾಪಾಡುತ್ತಾನೆ ಭಗವಂತನಿಗೂ ಅಸೂಯೆಯಾಗಬೇಕು ಹೀಗೂ ಬದುಕಿದ್ದಾನಲ್ಲ ಅನ್ನುವ ಕಾರಣಕ್ಕೆ. ಇಂಥ ವಿಶೇಷ ಪ್ರೇರಣೆ ಕಣ್ಣ ಮುಂದಿರುವಾಗ ಹೊರಗೆ ಹುಡುಕುವುದೇನಕ್ಕೆ. ನಾವು ಬದಲಾಗುವುದಕ್ಕೆ ಪ್ರಯತ್ನಪಡಬೇಕು ಹೌದು ತಾನೆ?

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ