ಸ್ಟೇಟಸ್ ಕತೆಗಳು (ಭಾಗ ೧೨೧೭) - ಪರೀಕ್ಷೆ

ಸ್ಟೇಟಸ್ ಕತೆಗಳು (ಭಾಗ ೧೨೧೭) - ಪರೀಕ್ಷೆ

ಮಗಳ ಶೈಕ್ಷಣಿಕ ಪರೀಕ್ಷೆ ಆ ಕೊಠಡಿಯ ಒಳಗೆ ನಡೆಯುತ್ತಿದೆ. ಹೊರಗಡೆ ಮಗಳನ್ನ ಕರೆದುಕೊಂಡು ಬಂದ ಹೆತ್ತವರು ಕಾಯುತ್ತಿದ್ದಾರೆ. ಅಲ್ಲಿ ಪರೀಕ್ಷೆಯಲ್ಲಿ ಉತ್ತಮವಾದ ಅಂಕವನ್ನ ಆಕೆ ಪಡೆದುಕೊಳ್ಳಲೇಬೇಕು. ತರಗತಿಯಲ್ಲಿ ತುಂಬಾ ಚೆನ್ನಾಗಿ ಪಾಠವು ಕೂಡ ಆಗಿದೆ, ಅಭ್ಯಾಸ ಅದ್ಭುತವಾಗಿದೆ, ಒಳ್ಳೆಯ ಅಂಕದಿಂದ ಜೀವನದ ಬದಲಾಗುವ ದಾರಿ ಇನ್ನೂ ಸ್ವಲ್ಪ ದೂರದಲ್ಲಿ ಇದೆ. ಹೊರಗೆ ಕುಳಿತ ಆ ಎರಡು ಮುಗ್ದ ಜೀವಗಳು ಶಾಲೆಯ ಮೆಟ್ಟಿಲನ್ನ ಇಂದಿನವರೆಗೂ ನೋಡಿದವರಲ್ಲ. ಅವರ ಜೀವನದಲ್ಲಿ ಮೊದಲು ಪರೀಕ್ಷೆಗಳು ಎದುರಾಗಿ ನಂತರ ಅದರಿಂದ ಪಾಠವನ್ನು ಕಲಿತು ಈಗ ಬದುಕುವ ದಾರಿಯನ್ನ ಸರಿ ಮಾಡಿಕೊಂಡಿದ್ದಾರೆ. ಮಗಳಿಗೆ ಜೀವನ ಕಲಿಸಬೇಕಾದ ಪಾಠ ಇನ್ನು ಮುಂದೆ ಇದೆ. ಹೆತ್ತವರ ಆಸೆ ಇಷ್ಟೇ ಮಗಳು ಯಾವುದಕ್ಕೂ ಕುಗ್ಗಬಾರದು, ಸಾಧ್ಯವಿಲ್ಲ ಅಂತ ಹೆಜ್ಜೆ ಹಿಂದೆ ಇಡಬಾರದು, ಅದಕ್ಕಾಗಿ ಸಾಧ್ಯವಾಗುವ ಎಲ್ಲ ಪರಶ್ರಮವನ್ನು ಹಾಕಲು ಹಾಗೆ ಜೊತೆಗೆ ನಿಂತಿದ್ದಾರೆ. ಬೆನ್ನ ಮೇಲೆ ಸಾಲದ ಹೊರೆ ಹೆಚ್ಚಾಗಿದೆ, ಕನಸುಗಳನ್ನು ಗಂಟು ಕಟ್ಟಿಯಾಗಿದೆ. ಎಲ್ಲವನ್ನು ಮಗಳಿಗಾಗಿ ದಾರೆ ಎರೆದು ಬದುಕು ಸವೆಸುತ್ತಿದ್ದಾರೆ. ಒಳಗೆ ಪರೀಕ್ಷೆ ಬರೆಯುತ್ತಿರುವ ಕೈ, ಹೊರಗೆ ಕುಳಿತ ತಂದೆ ತಾಯಿಗಳ ಜೀವನದ ಅದ್ಭುತ ಕ್ಷಣಗಳನ್ನು ಮುಂದೆ ಬರೆಯುವುದಕ್ಕಿದೆ. ಒಳಿತಾಗುತ್ತದೆ ಮತ್ತು ಒಳಿತೇ ಆಗಬೇಕು ಈ ನಂಬಿಕೆ ಮಾತ್ರ ಅವರ ನಡುವೆ ಸೇತುವೆಯಾಗಿದೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ