ಸ್ಟೇಟಸ್ ಕತೆಗಳು (ಭಾಗ ೧೨೧೯) - ಪ್ರೇರಣೆ

ನಿಮಗೆ ಬದುಕು ಭಯವಾಗಲಿಲ್ವಾ? ಮದುವೆಗಿಂತ ಮೊದಲು ಉತ್ತಮವಾದ ಮನೆ ಮಧ್ಯಮ ವರ್ಗ ಅಂದುಕೊಳ್ಳುವಂತಹ ಸ್ಥಿತಿ ನಿಮ್ಮದಾಗಿತ್ತು, ಮದುವೆಯಾಗಿ ಹೊಸ ಮನೆಗೆ ಕಾಲಿಟ್ಟಾಗ ಬಡತನ ಆ ಮನೆಯಲ್ಲಿ ಮನೆ ಮಾಡಿತ್ತು. ಗೋಡೆ ನೋಡಿದ್ದ ಮನೆಗೆ ತೆಂಗಿನ ಗರಿಗಳು ಗೋಡೆಯಾದಾಗ, ಮಳೆಯ ಸಂದರ್ಭದಲ್ಲಿ ನೀರು ಮನೆ ಒಳಗೆ ಓಡಾಡುವಾಗ ಪುಟ್ಟ ಮಗುವನ್ನು ಕೈಯಲ್ಲಿ ಹಿಡಿದ ನಿಮಗೆ ಭಯವಾಗಲಿಲ್ಲವೇ? ಗಂಡ ಹೆಂಡತಿ ಇಬ್ಬರೂ ದುಡಿಯಲೇಬೇಕಾದ ಅನಿವಾರ್ಯತೆ ಆ ದಿನದ ದುಡಿಮೆ ತಪ್ಪಿದರೆ ಮನೆ ಒಳಗೆ ಅನ್ನಕ್ಕೂ ಕೊರತೆ ಉಂಟಾಗುವ ಸನ್ನಿವೇಶ ಮನೆಯಲ್ಲಿದ್ದರೂ ಮುಖದಲ್ಲಿ ನಗು ತಂದುಕೊಳ್ಳುವ ಕ್ಷಣದಲ್ಲಿ ನಿಮಗೆ ಭಯವಾಗಲಿಲ್ಲವೇ? ಒಬ್ಬಳೇ ಮಗಳನ್ನ ಮದುವೆ ಮಾಡಿ ಕೊಡಬೇಕು ಅದಕ್ಕಿಂತ ಮೊದಲು ಮನೆಗೊಂದು ಗಟ್ಟಿಯ ಆಧಾರ ಸ್ತಂಭ ಬೇಕು. ಗಂಡ ಹೆಂಡಿರ ಇಬ್ಬರ ಕೆಲಸ ಸೇರಿದ್ರೂ ಆ ಕನಸಿಗೆ ಧೈರ್ಯ ಸಾಕಾಗುತ್ತಿಲ್ಲ ಮುಂದೇನು ಅನ್ನುವ ಯೋಚನೆ ಪ್ರತಿದಿನ ರಾತ್ರಿ ಕಾಡುತ್ತಿದ್ದರು ನಿಮಗೆ ಬದುಕು ಭಯವಾಗಲಿಲ್ಲವೆ? ಎಲ್ಲ ಪ್ರಶ್ನೆಗಳನ್ನ ಅವರ ಮುಂದೆ ಇಟ್ಟಾಗ,
"ಇದರಲ್ಲಿ ಭಯಪಡುವುದಕ್ಕೆ ಏನಿದೆ, ನಿನ್ನೆಗಿಂತ ಇವತ್ತು ಉತ್ತಮವಾಗಿದೆ, ನಾಳೆ ಇನ್ನೂ ಉತ್ತಮವಾಗಿ ಖಂಡಿತವಾಗಿ ಆಗುತ್ತೆ. ಭಗವಂತ ಜೊತೆಗಿದ್ದಾನೆ ಸುತ್ತಮುತ್ತ ನಂಬಿಕಸ್ಥರನ್ನು ಪ್ರೀತಿ ಪಾತ್ರರನ್ನ ಸಹಾಯಕ್ಕೆ ನಿಲ್ಲುವವರನ್ನು ಸಂಪಾದಿಸಿದ್ದೇನೆ. ಒಬ್ಬರಿಗೂ ಕೆಟ್ಟದ್ದನ್ನು ಬಯಸಿಲ್ಲ. ಹಾಗಾಗಿ ನನಗೆ ಖಂಡಿತವಾಗಿಯೂ ಒಳ್ಳೆಯದಾಗುತ್ತೆ. ಹಿಂದಿದ್ದ ಬದುಕು ಈಗ ಬದಲಾಗಿದೆ, ಈಗ ಇದ್ದ ಬದುಕು ಮುಂದೆ ಖಂಡಿತವಾಗಿಯೂ ಬದಲಾಗುತ್ತದೆ. ಅದೇ ಧೈರ್ಯವನ್ನು ಕಣ್ಣಲ್ಲಿ ತುಂಬಿಸಿಕೊಂಡು ನನ್ನ ಕಣ್ಣಮುಂದಿನಿಂದ ಹಾದು ಹೋದರು. ಅದೊಂದು ಮಿಂಚು ಸಾಕಾಯ್ತು ನನ್ನ ಬದುಕಲ್ಲಿ ಹೊಸತೇನೋ ಮಾಡಬೇಕು ಅನ್ನುವ ಪ್ರೇರಣೆಗೆ…
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ