ಸ್ಟೇಟಸ್ ಕತೆಗಳು (ಭಾಗ ೧೨೨೧) - ಕೋಳಿ

ನಾಲ್ಕು ಚಕ್ರದ ಲಾರಿ ಮೇಲೆ ರಸ್ತೆಯಲ್ಲಿ ದೊಡ್ಡ ದೊಡ್ಡ ಪೆಟ್ಟಿಗೆಯೊಳಗೆ ಸಾಗುತ್ತಿದ್ದಾವೆ ಕೋಳಿಗಳು. ಯಾವ ಕೋಳಿಗೂ ತಮ್ಮ ಮುಂದಿನ ಬದುಕಿನ ಬಗ್ಗೆ ನಿಶ್ಚಿತತೆ ಇಲ್ಲ. ದಿನಕ್ಕೆ ಕೆಲವರು ಕಮ್ಮಿ ಆಗುತ್ತಿದ್ದಾರೆ ಯಾಕೆನ್ನುವುದು ಅರಿವಿಲ್ಲ. ಕಷ್ಟ ಪಡಬೇಕಾದ ಪರಿಸ್ಥಿತಿಯಿಲ್ಲ. ತಿಂದು ದಪ್ಪಗಾಗಬೇಕು ಒಂದು ಕಡೆ ಬೆಳೆದವರು, ಯಾರೋ ಹಿಡಿಯುತ್ತಾರೆ ಇನ್ನೊಂದು ಕಡೆಗೆ ಸಾಗುತ್ತಾರೆ. ದೊಡ್ಡ ದೊಡ್ಡ ಗಾಡಿಗಳು ಹೊತ್ತೊಯ್ಯುತ್ತವೆ ಒಬ್ಬರ ಮೇಲೊಬ್ಬರನ್ನ ಹಾಕಿ, ಕಷ್ಟಗಳನ್ನು ಹೇಳಿಕೊಳ್ಳುವ ಹಾಗಿಲ್ಲ. ಯಾಕೆಂದರೆ ತಿನ್ನೋದಕ್ಕೆ ಕೊಟ್ಟಿದ್ದಾರೆ ತಾನೇ? ಪ್ರಶ್ನೆ ಮಾಡುವ ಹಾಗಿಲ್ಲ. ಯಾರೋ ಸಾಕಿದವರು ಯಾರು ಮಾರಾಟ ಮಾಡುವವರು ಇನ್ಯಾರೋ ತಿನ್ನುವವರು, ಹೀಗೆ ಗತಿಯಿಲ್ಲದ ಬದುಕಿಗೆ ಬದಲಾವಣೆಯನ್ನು ತರಲು ಮನಸ್ಸು ಬಯಸಿದರೂ ಕೂಡ ಸುತ್ತಮುತ್ತಲು ಯಾರು ಒಪ್ಪಿಗೆ ಸೂಚಿಸುತ್ತಿಲ್ಲ. ಬದಲಾಗಬೇಕು ಅಂತ ಆಸೆ ಇದ್ದರೂ ಏನೊಂದು ಯೋಚಿಸದೆ ನಾಳೆಯ ಬಗ್ಗೆ ಕನಸುಗಳಿಲ್ಲದೆ ಸುಮ್ಮನೆ ಬದುಕಿ ಬಿಡಬೇಕು.
ಓ, ನಾನು ಕೋಳಿ ಬಗ್ಗೆ ಮಾತಾಡ್ತಾ ಇದ್ದೇನೆ ಅಂತ ಅಂದುಕೊಂಡ್ರಾ? ಇಲ್ಲ ಸರ್, ನಾವು ನಮ್ಮ ಬಗ್ಗೆ ಮಾತಾಡ್ತಾ ಇದ್ದೇನೆ. ಕೆಲಸ ಯಾರೋ ಹೇಳುತ್ತಾರೆ,, ಇನ್ಯಾರೋ ಕೇಳ್ತಾರೆ. ನಾವೇ ನಮ್ಮದು ಅನ್ನುವ ಸ್ವಂತ ನಿಲುವಿಲ್ಲದೆ ಹೋದರೆ ಹೀಗಾಗಿಬಿಡುತ್ತೇವೆ.. ಹಾಗಾಗಿ ನಾವು ಫಾರಂ ಕೋಳಿಗಳಾಗುವುದಕ್ಕಿಂತ ಸ್ವಂತ ಕಾಳುಗಳನ್ನು ಹೆಕ್ಕಿ ತಿನ್ನುವ ಊರಿನ ಕೋಳಿಗಳಾಗುವುದು ಒಳಿತು ಏನಂತೀರಿ?
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ