ಸ್ಟೇಟಸ್ ಕತೆಗಳು (ಭಾಗ ೧೨೨೪) - ಅಂತರಾಳ

ಅವಳ ನಗು ಒಂದೇ ಅವಳನ್ನ ಇಂದಿನವರೆಗೂ ಬದುಕಿಸಿದೆ. ಮುಖದ ತುಂಬಾ ನಗುವ ತುಂಬಿಕೊಂಡು ಎಲ್ಲರನ್ನೂ ಎದುರುಗೊಳ್ಳುತ್ತಾಳೆ, ಆ ನಗುವಿನ ಹಿಂದೆ ಕಣ್ಣಿನ ಒಳಗೆ ಒಂದಷ್ಟು ನೋವಿನ ಹನಿಗಳು ತಡೆಗಟ್ಟಿ ನಿಂತಿವೆ. ಪ್ರೀತಿಸಿದ ಜೀವ ಒಂದು ನೆನಪಿನ ಶಕ್ತಿ ಕಳೆದುಕೊಂಡು ಪುಟ್ಟ ಮಗುವಿನಂತೆ ಕಣ್ಣ ಮುಂದೆ ಮಲಗಿರುವಾಗ ಆಕೆ ಅದನ್ನು ಸಹಿಸಿಕೊಂಡು ನಗುತ್ತಿರುವ ಶಕ್ತಿ ಎಂತಹದು. ಈ ನೋವು ಯಾರಿಗೂ ಅರ್ಥವಾಗುತ್ತಿಲ್ಲ. ಹೊರಗಿನಿಂದ ನೋಡುವ ಕಣ್ಣುಗಳ ಪ್ರಕಾರ ಆಕೆ ತಲೆತಗ್ಗಿಸಿ ಅಳುತ್ತಿರಬೇಕು, ಬಂದ ಪ್ರತಿಯೊಬ್ಬರಲ್ಲೂ ತನ್ನ ಬದುಕಿನ ಕಷ್ಟವನ್ನು ಹೇಳಿ ಬಿಕ್ಕಳಿಸಿ ಕಣ್ಣೀರಿಳಿಸಬೇಕು, ಮುಖವನ್ನ ಸಣ್ಣದು ಮಾಡಿ ಸದಾ ಚಿಂತಿಯಲ್ಲಿರಬೇಕು. ಆಕೆ ನಗುತ್ತಿದ್ದರೆ ಪ್ರೀತಿಸುವ ಜೀವದ ಬಗ್ಗೆ ಆಕೆಗೆ ಕಾಳಜಿ ಇಲ್ಲ ಎನ್ನುವವರಿದ್ದಾರೆ .ಆದರೆ ಬಂದವರಿಗೆ ಗೊತ್ತಿಲ್ಲ, ಆಕೆ ಎಷ್ಟೇ ಕುಗ್ಗಿ ಹೋಗಿದ್ದರೂ ಭರವಸೆಯಿಂದ ಬದುಕ ಸಾಗಿಸುತ್ತಿದ್ದಾಳೆ ಅಂತ. ಆಕೆಯೊಳಗಿನ ಚೈತನ್ಯದ ಶಕ್ತಿ ಆಕೆಯನ್ನು ನಗುವಂತೆ ಮಾಡಿದೆ. ಆಕೆಯ ನಗುವಿನ ಮುಂದೆ ನೆನಪುಗಳ ಕಳೆದುಕೊಂಡ ಪ್ರೀತಿಯ ಜೀವ ಮತ್ತೆ ಚೇತರಿಸಿಕೊಂಡು ಕಣ್ಣ ಮುಂದೆ ನಿಂತು ನಗುತ್ತಾನೆ. ಹಾಗಾಗಿ ಆಕೆ ನಗುತ್ತಾಳೆ ನಗುವ ಹಂಚುತ್ತಾಳೆ ಈ ಧೈರ್ಯ ಬದುಕಿನಲ್ಲಿ ಎಲ್ಲರಿಗೂ ಬೇಕೆನಿಸುತ್ತದೆ ನನಗೆ. ನೀವೇನಂತಿರಿ?
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ