ಸ್ಟೇಟಸ್ ಕತೆಗಳು (ಭಾಗ ೧೨೨೭) - ಕಂಡ ಬದುಕು

ಸೈಕಲ್ ನ ಚಕ್ರ ತಿರುಗುತ್ತಾ ಇದೆ, ಆತನ ದೇಹದಲ್ಲಿ ಬೆವರು ಎದ್ದುನಿಂತು ನೆಲವನ್ನ ಸ್ಪರ್ಶಿಸ್ತಾ ಇದೆ, ಆತನ ಮುಖದಲ್ಲಿ ಆಯಾಸ ಕಾಣುತ್ತಿಲ್ಲ, ಕಣ್ಣುಗಳು ಮಿನುಗುತ್ತಿವೆ, ತುಟಿ ನಗುವನ್ನು ಕಳೆದುಕೊಂಡಿಲ್ಲ, ಯಾವುದೋ ಸಂಭ್ರಮದ ಹಾಡನ್ನು ಗುನುಗುತ್ತಾ ಚಲಿಸುತ್ತಿದ್ದಾನೆ. ಮುಂದೆ ಅವನ ಪಕ್ಕದಲ್ಲಿ ಹಾದು ಹೋಗುತ್ತಿರುವ ನಾಲ್ಕು ಚಕ್ರದ ದೊಡ್ಡ ಕಾರಿನಲ್ಲಿ ಒಳಗೆ ಕುಳಿತ ನಾಲ್ಕು ಜನರು ಮುಖದಲ್ಲಿ ಸಂಭ್ರಮವಿಲ್ಲ, ಕಣ್ಣುಗಳಲ್ಲಿ ಬದುಕಿನ ನಿರಾಸೆ ಕಾಣುತ್ತಿದೆ, ದೇಹವೇನೋ ಬೆವರಿಲ್ಲ, ಒಂದಷ್ಟು ಮನಸ್ತಾಪಗಳು ನಾಳಿನ ಬಗ್ಗೆ ವಿಪರೀತ ಯೋಚನೆ ಬದುಕಿನ ಬಗ್ಗೆ ಭಯ ಕಾಡ್ತಾ ಇದೆ. ಒಂದು ಕ್ಷಣವು ನೆಮ್ಮದಿಯಿಂದ ಉಸಿರಾಡುವ ಯಾವ ಲಕ್ಷಣವೂ ಕಾಣುತ್ತಿಲ್ಲ. ನಿಧಾನವಾಗಿ ಹೋಗುತ್ತಿದ್ದ ಸೈಕಲನ್ನು ದಾಟಿಕೊಂಡು ಕಾರು ವೇಗವಾಗಿ ಮುಂದೆ ಹೋಯಿತು. ಆದರೆ ಬದುಕಿನಲ್ಲಿ ಅದೇ ವೇಗದಲ್ಲಿ ಸಂಭ್ರಮದಿಂದ ಸಾಗುವ ಯಾವ ರೂಪಕವು ಅಲ್ಲಿ ಕಾಣಲೇ ಇಲ್ಲ. ಕಣ್ಣ ಮುಂದೆಯೇ ಬದುಕಿನ ಸತ್ಯ ಕಂಡಿತು. ಜೀವನದ ಇನ್ನೊಂದು ದಿಕ್ಕನ್ನೇ ಪರಿಚಯ ಮಾಡಿಬಿಟ್ಟಿತು. ಬದುಕು ಸಂಭ್ರಮವಾಗುವುದು ನಾವು ನಮ್ಮೊಳಗೆ ಇದ್ದದನ್ನ ಇದ್ದಹಾಗೆ ಅನುಭವಿಸಿದಾಗ ಮಾತ್ರ. ಹೊಸ ಬಯಕೆ ಹೊಸ ನಿರೀಕ್ಷೆಗಳು ಮತ್ತೆ ಮತ್ತೆ ಕಾಡುತ್ತಿದ್ದಾಗ ಆ ಕ್ಷಣದ ಸಂಭ್ರಮ ನಮ್ಮನ್ನು ದಾಟಿ ಮುಂದೆ ಹೋಗಿಬಿಡುತ್ತದೆ. ಕಣ್ಣು ತೆರೆದು ಜಗವ ನೋಡು ಬದುಕು ಇನ್ನೂ ಅದ್ಭುತವಾಗಿರುತ್ತದೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ