ಸ್ಟೇಟಸ್ ಕತೆಗಳು (ಭಾಗ ೧೨೨೯) - ನಡತೆ-ನಡಿಗೆ

ಮರಳಿನ ಮೇಲೆ ಮತ್ತೆ ಮತ್ತೆ ನಡೆಯುತ್ತಿದ್ದ. ಆತನಿಗೆ ಅದೊಂದು ತುಂಬಾ ಆಸೆ. ತನ್ನ ಹೆಜ್ಜೆಗಳನ್ನ ನೋಡುಗರೆಲ್ಲರಿಗೆ ಕಾಣುವ ಹಾಗೆ ಉಳಿಸಿ ಹೋಗಬೇಕು ಅಂತ. ಆತ ಬೆಳಗಿನಿಂದ ಸಂಜೆಯವರೆಗೆ ದಿನವೂ ನಡೆದು ನಡೆದು ಸುಸ್ತಾದನೇ ವಿನಃ ಆತನ ಹೆಜ್ಜೆಗಳ ಗುರುತು ಯಾರಿಗೂ ಸಿಗಲೇ ಇಲ್ಲ. ಆತ ಒಂದಿಷ್ಟು ದೂರವನ್ನ ಸಾಗಿದ ನಂತರ ಮತ್ತೆ ಬೇಸರಗೊಂಡು ಮುಂದಿನ ಹೆಜ್ಜೆಗಳನ್ನು ಹಾಕುವುದಕ್ಕೆ ಪ್ರಯತ್ನಪಡುತ್ತಾನೆ. ತನ್ನ ಹೆಜ್ಜೆಗಳನ್ನ ಯಾರೂ ಗಮನಿಸುತ್ತಿಲ್ಲ, ಹಾದು ಹೋಗುವ ಯಾರಿಗೂ ನನ್ನ ಹೆಜ್ಜೆಯ ಕಷ್ಟದ ಅರ್ಥವಾಗುತ್ತಿಲ್ಲ. ನನ್ನ ಹೆಜ್ಜೆಯನ್ನ ಹಿಂಬಾಲಿಸಿ ಬರುವವರಿಲ್ಲ. ಹೀಗೆ ನೋವನ್ನ ಅನುಭವಿಸುತ್ತಾ ಮತ್ತೆ ಹೆಜ್ಜೆ ಇಡುತ್ತಿದ್ದಾನೆ. ಮರಳಿನಿಂದ ದೂರದಲ್ಲಿ ನಿಂತ ಹಿರಿಯರೊಬ್ಬರು ಹತ್ತಿರ ಕರೆದು ಬೆನ್ನು ತಟ್ಟಿ ಮಾತನಾಡಿದರು "ನೋಡು ಮಾರಾಯ ಮರಳಿನ ಮೇಲೆ ಎಷ್ಟೇ ಹೆಜ್ಜೆಗಳನಿಟ್ಟರೂ ಅದು ಮಾಯವಾಗಿಯೇ ಆಗುತ್ತದೆ. ನೀನು ವ್ಯಕ್ತಿಯ ವ್ಯಕ್ತಿತ್ವವನ್ನು ಬದಲಾಯಿಸುವಲ್ಲಿ ಕಾರ್ಯ ಪ್ರವೃತ್ತನಾದರೆ ನಿನ್ನ ಹೆಜ್ಜೆಗಳು ಸಾರ್ಥಕವಾಗುತ್ತದೆ. ನಿನ್ನ ನಡಿಗೆ ಯಾರಿಗೂ ದಾರಿದೀಪವಾಗುವುದಿಲ್ಲ ಆದರೆ ನಿನ್ನ ನಡತೆ ಬದುಕಿನ ಅದ್ಭುತ ಗಮ್ಯದ ಕಡೆಗೆ ಖಂಡಿತವಾಗಿಯೂ ಕೊಂಡೊಯುತ್ತದೆ. ನಡಿಗೆಗಿಂತ ನಡತೆ ಮುಖ್ಯ" ಇಷ್ಟು ದಿನದ ವ್ಯರ್ಥ ನಡಿಗೆಯನ್ನ ತೊರೆದು ತಾ ಮಾಡಬೇಕಾದ ಕೆಲಸದ ಕಡೆಗೆ ನಿಶ್ಚಿಂತೆಯಿಂದ ಹೊರಟೇ ಬಿಟ್ಟ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ