ಸ್ಟೇಟಸ್ ಕತೆಗಳು (ಭಾಗ ೧೨೩೪) - ಭಗವಂತ

ಸ್ಟೇಟಸ್ ಕತೆಗಳು (ಭಾಗ ೧೨೩೪) - ಭಗವಂತ

ಬೆಕ್ಕೊಂದು ದಾರಿ ಕಾಣದೆ ಅತ್ತಿಂದಿತ್ತ ಓಡಾಡ್ತಾ ಇತ್ತು. ಎಲ್ಲರನ್ನೂ ಕಂಡರೆ ಭಯ, ಮನೆಯಿಂದ ಹೊರಗೆ ಬಂದಾಗಿತ್ತು. ಭಯದಲ್ಲಿ ಕಣ್ಣು ಮುಚ್ಚಿ ದಿಕ್ಕು ಕಾಣದೆ ಓಡುತ್ತಾ ಅಪರಿಚಿತ ಸ್ಥಳಕ್ಕೆ ಬಂದು ನಿಂತುಬಿಟ್ಟಿತ್ತು. ಯಾರನ್ನು ನಂಬೋದು, ಯಾರ ಹತ್ತಿರ ಹೋಗೋದು ಏನೆಂದು ತಿಳಿಯದೆ ನೋವಿನಿಂದ ಕೂಗ್ತಾನೆ ಇತ್ತು. ತನಗೆ ರಕ್ಷಿತವಾದ ಸ್ಥಳ ಯಾವುದು ಅನ್ನೋದು ಅದಕ್ಕೆ ತಿಳಿಯಲೇ ಇಲ್ಲ. ಮೇಲೆ ಎಲ್ಲಾ ಕಡೆಗೂ ಓಡಿಹೋಗಿ ನೋಡಿ ಸ್ಥಳ ಪರೀಕ್ಷೆ ಮಾಡಿಕೊಂಡರು ಭಯ ಕಡಿಮೆಯಾಗಲೇ ಇಲ್ಲ .ಭಗವಂತನ ಬಳಿ ಬೇಡಿಕೊಂಡಿತು ನನ್ನ ಜೀವನ ಹೀಗೆ ಅಂತ್ಯವಾಗುತ್ತಾ ಅಥವಾ ನನ್ನ ಬದುಕಿಗೆ ಸರಿಯಾದ ದಾರಿ ಏನಾದರೂ ನೀಡಿದ್ದೀಯಾ ಅಂತ. ಭಗವಂತನ ಉತ್ತರ ಆ ಕ್ಷಣಕ್ಕೆ ತಲುಪಲೇ ಇಲ್ಲ. ಮತ್ತೆ ಮತ್ತೆ ಬದುಕಿಗಾಗಿ ಪರದಾಟ ಶುರುವಾಯಿತು. ಕೊನೆಗೆ ಎಲ್ಲೋ ಒಂದು ಕಡೆ ಒದ್ದಾಡುತ್ತಿರುವಾಗ ಯಾರೋ ಒಬ್ಬ ಅನಾಮಿಕನ ಕೈಗೆ ಸಿಕ್ಕು ಆ ಕ್ಷಣಕ್ಕೆ ಅವರ ಮನೆಯಲ್ಲಿ ಇಟ್ಟ ಹಾಲು ಅದಕ್ಕೆ ಆಹಾರವಾಯಿತು. ಆ ದಿನದಿಂದ ಬೆಕ್ಕಿನ ಬದುಕಿನ ಸ್ಥಳ ಆ ಮನೆಯಾಯಿತು ಮನೆಯವರಿಗೂ ಬೆಕ್ಕು ಅಂದ್ರೆ ಹೆಚ್ಚು ಪ್ರಿಯವಾಯಿತು. ಮನೆಯವರ ಬದುಕಿನಲ್ಲಿ ಬೆಕ್ಕಿನ ಆಗಮನದಿಂದ ಒಂದಷ್ಟು ಬದಲಾವಣೆಗಳಾದವು .ಬೆಕ್ಕಿಗೂ ತನ್ನ ಬದುಕಿನ ಮುಂದಿನ ಅವಕಾಶ ಈ ಸ್ಥಳವೆಂದು ಖಚಿತವಾಯಿತು. ಭಗವಂತ ಮೇಲೆ ನಿಂತು ನಗುವುದಕ್ಕೆ ಆರಂಭ ಮಾಡಿದ. ಪ್ರತಿಯೊಬ್ಬರ ಬದುಕಿನ ಮುಂದಿನ ಗಮ್ಯವನ್ನು ನಾನು ನಿರ್ಧರಿಸಿರುತ್ತೇನೆ ನೀನು ಪರಿಶ್ರಮ ಪಡಬೇಕು ನಂಬಬೇಕು ಮತ್ತೆ ಮತ್ತೆ ಪ್ರಯತ್ನ ಪಡುತ್ತಾನೆ ಇರಬೇಕು. ಪ್ರಯತ್ನ ಪಟ್ಟವರಿಗೆ ಮಾತ್ರ ಅವನ ಬದುಕಿನ ದಾರಿಯನ್ನ ಖಂಡಿತ ತಿಳಿಸಿಕೊಡುತ್ತೇನೆ....

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ