ಸ್ಟೇಟಸ್ ಕತೆಗಳು (ಭಾಗ ೧೨೩೬) - ಮರವಾಗಬೇಕು

ಸ್ಟೇಟಸ್ ಕತೆಗಳು (ಭಾಗ ೧೨೩೬) - ಮರವಾಗಬೇಕು

ನಮ್ಮ ಮನೆಯ ಮುಂದೆ ಬೆಳೆದ ಮರಕ್ಕೆ ಅದರ ನಾಳಿನ ಬಗ್ಗೆ ಏನೂ ಯೋಚನೆಯಿರಲಿಲ್ಲ. ಸಣ್ಣ ಬೀಜವನ್ನು ನೆಲದೊಳಗೆ ಇಟ್ಟಾಗ ತನಗೆ ಸಿಕ್ಕ ನೀರು, ಗಾಳಿಯನ್ನು ಪಡೆದುಕೊಂಡು ಬೇರುಗಳನ್ನು ಬಿಡುವುದಕ್ಕೆ ಆರಂಭ ಮಾಡಿತು. ಅದರೊಳಗೆ ಚಿಗುರು ಮೂಡಿತು. ಹಾಗೆ ಅನಂತವಾದ ಆಕಾಶವನ್ನು ನೋಡುತ್ತಾ ಸೂರ್ಯನ ಬೆಳಕನ್ನು ತನಗೆ ಬೇಕಾದ ಹಾಗೆ ಪಡೆದುಕೊಳ್ಳುತ್ತಾ ನೆಲದಿಂದ ಮೇಲೆ ಎದ್ದು ನಿಲ್ಲಲು ಪ್ರಾರಂಭ ಮಾಡಿತು. ಸುತ್ತಮುತ್ತ ತನ್ನನ್ನು ತಿನ್ನುವುದಕ್ಕೆ ಬರುವ ಪ್ರಾಣೀಗಳು ತನ್ನನ್ನು ಕಡಿಯುವುದಕ್ಕೆ ಸಿದ್ಧವಾಗಿ ನಿಂತ ಕತ್ತಿಗಳು ಇವೆಲ್ಲವನ್ನು ನೋಡುತ್ತಾ ನೋಡುತ್ತಾ ಧೈರ್ಯದಿಂದ ಮೇಲೆದ್ದು ನಿಂತಿತು. ಒಂದಷ್ಟು ಬಾರಿ ತುಂಡಾಗಿ ದೇಹದ ಕೆಲವೊಂದು ಅಂಗಗಳನ್ನು ಕಳೆದುಕೊಂಡರೂ ಸಹ ಧೈರ್ಯ ಕಳೆದುಕೊಳ್ಳದೆ ಮತ್ತೆ ಆಹಾರವನ್ನು ತಿಂದು ಚಿಗುರಿ ಮೇಲೇಳಲು ಆರಂಭಿಸಿತು. ನಾಳೆ ಏನಾಗುತ್ತೆ ಅನ್ನೋದರ ಅರಿವು ಅದಕ್ಕಿಲ್ಲ. ಹಣ್ಣುಗಳನ್ನು ನೀಡುತ್ತಾ ಇದೆ. ಸಂಭ್ರಮದಿಂದ ಆಕಾಶಕ್ಕೆ ತನ್ನನ್ನು ತೆರೆದುಕೊಂಡಿದೆ. ಒಂದು ದಿನವೂ ಬೇಸರವಿಲ್ಲ. ನೀರಿಲ್ಲ, ಸರಿಯಾದ ಬಿಸಿಲಿಲ್ಲ, ಬಿಸಿಲು ಹೆಚ್ಚಾಗಿದೆ ಹೀಗೆ ಸುತ್ತಮುತ್ತ ಬದುಕುವುದಕ್ಕೆ ಸಾಧ್ಯವಿಲ್ಲದಂತಹ ಸ್ಥಿತಿ ಇದ್ದರೂ ಇದ್ಯಾವುದನ್ನೂ ಯೋಚನೆ ಮಾಡದೆ ಇರುವಷ್ಟು ಅವಕಾಶವನ್ನು ಗಟ್ಟಿಯಾಗಿ ಬಳಸಿಕೊಂಡು ಉಸಿರು ಇರುವವರೆಗೆ ನೆಮ್ಮದಿಯಾಗಿ ಬದುಕಿದೆ. ನಾವು ಹಾಗಾದರೆ ನಾವು ಗಿಡವಾಗ ಬೇಕಲ್ವಾ ಮತ್ತೆ ಮರವಾಗುವುದರ ಕಡೆಗೆ ಹೆಜ್ಜೆ ಇಡಬೇಕು…

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ