ಸ್ಟೇಟಸ್ ಕತೆಗಳು (ಭಾಗ ೧೨೩೭) - ಕಾಲ

ಕಾಲವು ನೀನಂದು ಕೊಂಡಂತಿಲ್ಲ. ಸದ್ಯದ ಸಮಾಜಕ್ಕೆ ಏನು ಬೇಕೋ ಅದರ ಬಗ್ಗೆ ನಿಮಗೆಲ್ಲೂ ಮಾಹಿತಿಯೇ ಸಿಗೋದಿಲ್ಲ. ಮಿನುಗುವ ಕಣ್ಣಿನ ಹುಡುಗಿಯ ಬಗ್ಗೆ ಅದ್ಭುತ ವಿಚಾರಗಳು ನಿನ್ನ ಮುಂದೆ ಬಿದ್ದರೆ, ದೇಶವನ್ನು ಪ್ರತಿನಿಧಿಸಿದ ಹುಡುಗಿಯೊಬ್ಬಳು ಕ್ರೀಡೆಯಲ್ಲಿ ಹೆಸರುವಾಸಿಯಾದದ್ದು ನಾಲ್ಕು ಜನರ ಬಾಯಿಯಲ್ಲಿ ಮುಗಿದು ಹೋಗುತ್ತದೆ. ಭಕ್ತಿಗಾಗಿ ನಿಂತ ಸರತಿ ಸಾಲಿನಲ್ಲಿ ದುಡ್ಡು ಹೆಚ್ಚು ನೀಡಿದವನಿಗೆ ಗೌರವ ಹೆಚ್ಚಾಗಿ ಸಿಗುತ್ತದೆ. ದೇವರನ್ನ ಎಲ್ಲರೂ ನೋಡುವುದಕ್ಕೆ ಬರ್ತಾರೆ. ಯಾರು ಹೆಚ್ಚು ಪ್ರಸಿದ್ದಿಗೆ ಬಂದಿದ್ದಾರೋ ಅವರು ದೇವರನ್ನು ನೋಡೋದಕ್ಕೆ ಬಂದಾಗ ದೇವರ ಮೌಲ್ಯ ಹೆಚ್ಚಾಗುತ್ತದೆ .ಊರಿನ ಬಡವರ ಸಮಸ್ಯೆಗಳಿಗೆ ಕಣ್ಣಾಗಬೇಕಾದ ಕ್ಯಾಮರಾಗಳು ಯಾವುದೋ ವ್ಯಕ್ತಿಯ ಮದುವೆ ಅವರ ಆಡಂಬರದ ಜೀವನ ಅವರ ಬದುಕಿನ ರೀತಿಗಳನ್ನೇ ತೋರಿಸುವುದಕ್ಕೆ ಪ್ರಾರಂಭ ಮಾಡುತ್ತಾರೆ. ಇದೆಲ್ಲವೂ ವಿಪರ್ಯಾಸ ಮಗಾ, ನೀನಿದನ್ನು ಎಷ್ಟೇ ಬದಲಾಯಿಸುವುದಕ್ಕೆ ಪ್ರಯತ್ನ ಪಟ್ಟರೂ ಸಹ ಜಗತ್ತು ಇದನ್ನ ಒಪ್ಪಿಕೊಳ್ಳುವುದಕ್ಕೆ ತಯಾರಿಲ್ಲ. ಒಂದೋ ನೀನು ನಿನ್ನ ರೀತಿಯಲ್ಲಿ ಕೆಲಸವನ್ನು ಮುಂದುವರಿಸಿಕೊಂಡು ಹೋಗಬೇಕು ಅಥವಾ ಜಗತ್ತಿನ ಪ್ರವಾಹದ ಜೊತೆ ನೀನು ಕೊಚ್ಚಿ ಹೋಗಬೇಕು. ನೆನಪಿಟ್ಟುಕೋ ನಿನ್ನಿಂದಲೂ ಅದ್ಭುತವು ಖಂಡಿತವಾಗಿಯೂ ಘಟಿಸುತ್ತದೆ. ಆದರೆ ಕಾಯಬೇಕು ಪ್ರಯತ್ನಿಸುತ್ತಾನೆ ಇರಬೇಕು. ರಾಮರಾಯರು ತನ್ನ ಜವಾಬ್ದಾರಿಗಳನ್ನು ಮಗನಿಗೆ ದಾಟಿಸುತ್ತಾ ಬದುಕಿನ ಪಾಠವನ್ನು ಮಾಡಿ ಸುಮ್ಮನಾಗಿ ಬಿಟ್ಟರು...
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ