ಸ್ಟೇಟಸ್ ಕತೆಗಳು (ಭಾಗ ೧೨೩೮) - ವಿಪರ್ಯಾಸ

ಸ್ಟೇಟಸ್ ಕತೆಗಳು (ಭಾಗ ೧೨೩೮) - ವಿಪರ್ಯಾಸ

ದಾರಿಯಲ್ಲಿ ಹೋಗುತ್ತಾ ಇದ್ದ ಮಧ್ಯ ವಯಸ್ಸಿನ ಹುಡುಗ ತನ್ನ ತಂದೆಯನ್ನು ಗದರಿಸುತ್ತಿದ್ದ. ಅಪ್ಪಾ ನಿನಗೆ ಅರ್ಥವಾಗುವುದಿಲ್ಲ. ನನ್ನ ಜೊತೆ ಬರಬೇಡ ಅಂತ ಎಷ್ಟು ಸಾರಿ ಹೇಳಿದರು ನನ್ನ ಕೈ ಹಿಡಿದುಕೊಂಡೆ ಬರುತ್ತಿಯಾ. ನನಗೆ ಇನ್ನು ನೀನು ಜೀವನದ ಪಾಠ ಮಾಡಬೇಕಾಗಿಲ್ಲ. ನಾನು ಎಲ್ಲವನ್ನು ಅರ್ಥೈಸಿಕೊಂಡಿದ್ದೇನೆ. ನಿನಗೆ ಯಾವ ಕ್ಷಣದಲ್ಲಿ ಹೇಗೆ ವರ್ತಿಸಬೇಕು ಅನ್ನೋದು ತಿಳಿಯೋದಿಲ್ಲ. ಅದರಿಂದ ನನ್ನ ಗೌರವವೂ ಕಡಿಮೆ ಆಗ್ತಾ ಹೋಗುತ್ತೆ. ನೀನು ಅದನ್ನು ಅರ್ಥ ಮಾಡ್ಕೊ. ಮೊದಲು ಸುಮ್ಮನಿರೋದನ್ನ ಕಲಿ. ಕಾಲ ಬದಲಾಗಿದೆ. ಇದೇ ಮಾತನ್ನು ಕಲ್ಲು ಬೆಂಚಿನ ಮೇಲೆ ಕುಳಿತಿದ್ದ ಎಂಬತ್ತರ ವಯಸ್ಸಿನ ವೃದ್ಧರೊಬ್ಬರು ಕೇಳಿ ಹತ್ತಿರ ಬಂದು ತೀಕ್ಷ್ಣವಾದ ಕಣ್ಣುಗಳಿಂದ ಆ ಮಧ್ಯ ವಯಸ್ಸಿನ ಹುಡುಗನನ್ನ ಗದರಿಸುವುದಕ್ಕೆ ಆರಂಭ ಮಾಡಿದ್ರು. ನೋಡು ಮಗಾ ನೀನು ಮಾತಾಡ್ತಾ ಇರೋದು ತಪ್ಪು. ಮೊದಲು ನೀನು ನಿನ್ನ ತಂದೆಯ ಮೌಲ್ಯವನ್ನು ಅರ್ಥ ಮಾಡಿಕೊಳ್ಳಬೇಕು. ಅವರು ನಿನಗೆ ಜೀವನದಲ್ಲಿ ಹಾಕಿಕೊಟ್ಟ ದಾರಿ ಎಂತಹುದು ಯಾವ ಸಂದರ್ಭದಲ್ಲಿ ಏನೆಲ್ಲ ಕನಸುಗಳನ್ನು ತೊರೆದು ನಿನ್ನ ಬದುಕಿಗಾಗಿ ಆಸರೆಯಾಗಿದ್ದರು. ಅವರ ಕಷ್ಟಗಳ ಅರಿವು ನಿನಗಾದಾಗ ಮಾತ್ರ ತಂದೆಯ ಮೌಲ್ಯ ಅರ್ಥ ಆಗುತ್ತೆ. ವರ್ಷಕ್ಕೊಂದ್ಸಲ ನಿನ್ನ ಮೊಬೈಲ್ನಲ್ಲಿ ತಂದೆಯ ಚಿತ್ರಗಳನ್ನು ಹಾಕಿ ನೀನು ಪ್ರೀತಿಸ್ತಿದ್ಯಾ ಅಂತ ಜಗತ್ತಿಗೆ ತೋರಿಸುವ ಬದಲು ನಿನ್ನ ತಂದೆ ಕಣ್ಣೀರಿಳಿಸದ ಹಾಗೆ ಕೈ ಹಿಡಿದು ಕರೆದುಕೊಂಡು ಹೋಗುವವನು ನೀನಾಗಬೇಕು. ಅಂತಹ ಮಕ್ಕಳನ್ನು ಮಾತ್ರ ದೇವರು ಗೌರವಿಸುತ್ತಾನೆ. ನೀನು ಬದಲಾದರೆ ನಿನ್ನ ಮಗನು ನಿನಗೆ ಗೌರವ ಕೊಡುತ್ತಾನೆ. ತಂದೆಗಿಂತ ದೊಡ್ಡ ದೇವರಿಲ್ಲ ಇದನ್ನ  ಅರ್ಥ ಮಾಡಿಕೊಳ್ಳಬೇಕು .

ಆತ ಕ್ಷಮೆ ಕೇಳಿ ಮುಂದುವರೆದು ಬಿಟ್ಟ. 80ರ ವಯಸ್ಸಿನ ಅಜ್ಜ ಹಿಂತಿರುಗಿ ಗೇಟು ತೆರೆದು ವೃದ್ಧಾಶ್ರಮದ ಒಳಗೆ ನಡೆದು ಹೊರಟರು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ