ಸ್ಟೇಟಸ್ ಕತೆಗಳು (ಭಾಗ ೧೨೩) - ಭಯದ ಸಾವು
ಮೌನವೇ ಮೌನ ತಾಳಿದ ಹೊತ್ತು. ನಿಶೆಯೊಂದಿಗೆ ತಾರೆಗಳು ಆಗಸದಲ್ಲಿ ಆಟವಾಡುತ್ತಿರುವ ಸಮಯ, ಬಿಸಿಯಾಗಿದ್ದ ರಸ್ತೆ ಉಸಿರೆಳೆದುಕೊಂಡು ನೆಮ್ಮದಿಯ ನಿದ್ರೆಯಲ್ಲಿತ್ತು. ಪಾದಾಚಾರಿ ರಸ್ತೆಗೆ ತಲೆ ಒರಗಿಸಿದ ಡಾಂಬಾರಿಗೆ ನಿದ್ದೆಯ ಮಂಪರು ಆವರಿಸಿತ್ತು. ಆದರೆ ಅಲ್ಲೇ ಪಕ್ಕದ ಗುಡಿಸಲೊಳಗೆ ಸಣ್ಣ ಮಿಣುಕು ದೀಪ ಉರಿಯುತ್ತಿತ್ತು. ಇನ್ನೇನು ಆರುವ ಸ್ಥಿತಿಯಲ್ಲಿ ಹೋರಾಡುತ್ತಿತ್ತು. ಮನೆಯೊಳಗಿನ ಎರಡು ಜೀವಗಳು ಯೌವ್ವನ ದಾಟಿ ಮುಪ್ಪನ್ನು ಹೊತ್ತು ಸಮಯವನ್ನು ದಾಟಿಸುತ್ತಿದ್ದರು ದೀಪದ ಹಾಗೆ. ಜಗವೆಲ್ಲ ನಿದ್ರೆಯಲ್ಲಿದ್ದರೂ ಭಯ ಕಣ್ಣು ಮುಚ್ಚಲು ಬಿಟ್ಟಿಲ್ಲ. ಆ ದಿನ ಬೆಳಿಗ್ಗೆ ಕೆಲಸದ ಮನೆಯ ಯಜಮಾನ ಇವರ ಜಾಗವನ್ನು ಮಾರಾಟ ಮಾಡಲು ತಿಳಿಸಿದ್ದ.
ಒಪ್ಪಿಗೆ ಸೂಚಿಸದೇ ಇದ್ದುದಕ್ಕೆ ಮೀಸೆ ಕೆಳಗೆ ನಕ್ಕು ಯಾರಿಗೂ ಏನು ಸೂಚನೆ ನೀಡಿದ. ಯಜಮಾನ ಯೋಜನೆಗಳು ಹಲವರ ಸಾವಿಗೆ ಕಾರಣವಾಗಿತ್ತು . ಇದೇ ಕಾರಣಕ್ಕೆ ಮುದಿಜೀವಗಳು ಅಂಗೈಯೊಳಗೆ ಪ್ರಾಣ ಒತ್ತೆ ಹಿಡಿದು ದೀಪವನ್ನು, ತಮ್ಮನ್ನು,ಕಾಯುತ್ತಿದ್ದರು. ದೀಪವಾರಿತು. ಬೆಂಕಿಯ ಕೆನ್ನಾಲಿಗೆ ಎದ್ದಿತು. ಮನೆಗೆ ಬೆಂಕಿ ಬಿದ್ದಿತ್ತು, ಮತ್ತೆ ದೀಪ ಉರಿಸುವ ಅವಕಾಶವೇ ಇಲ್ಲದೆ ಅಸುನೀಗಿದವು. ಓದುವ ಪತ್ರಿಕೆ ನುಡಿಯಿತು "ನೊಂದು ಜೀವಗಳ ಆತ್ಮಹತ್ಯೆ "ಎಲ್ಲರೂ ನಂಬಿದವರು ತಿಳಿದವರು ತುಳಿದರು…
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ