ಸ್ಟೇಟಸ್ ಕತೆಗಳು (ಭಾಗ ೧೨೪೨) - ಗಂಟು

ಸ್ಟೇಟಸ್ ಕತೆಗಳು (ಭಾಗ ೧೨೪೨) - ಗಂಟು

ಅಮ್ಮನಿಗೆ ಪ್ರತಿಸಲವೂ ಹೇಳ್ತಾ ಇದ್ದೆ, ಸುಮ್ಮನೆ ಸಿಕ್ಕಿದನ್ನೆಲ್ಲ ಗಂಟು ಕಟ್ಟಿ ಅದ್ಯಾಕೆ ಅಟ್ಟದ ಮೇಲೆ ಇಡ್ತಿಯಾ ಅದರಿಂದ ಏನು ಉಪಯೋಗ ಇಲ್ಲ ಅದನ್ನು ಬಿಸಾಡಿ ಬಿಟ್ರೆ ಮನೆ ಸ್ವಚ್ಛವಾಗಿರುತ್ತೆ ಅಂತ. ಅಮ್ಮ ನನ್ನನ್ನು ನೋಡಿ ನಕ್ಕು ಮತ್ತೆ ಕೆಲಸವನ್ನು ಮುಂದುವರಿಸಿದರು. ಕಾಲಗಳು ತುಂಬಾ ದಾಟಿ ಬಂದು ಒಂದಷ್ಟು ಹೊಸ ನೀರು ಹೊಟ್ಟೆಗೂ ಇಳಿದು ದೇಹವನ್ನು ಸವರಿಕೊಂಡು ಹೋಯಿತು. ಹಲವು ಮಳೆಗಳನ್ನು ನೋಡಿದ್ದಾಯ್ತು. ಬದುಕಿನ ರೀತಿ ರಿವಾಜುಗಳು ಬದಲಾಗವು. ಹೊಸ ಬಾಂಧವ್ಯ ಹುಟ್ಟಿಕೊಂಡಿತು. ಒಂದು ದಿನ ಮತ್ತೆ ಮನೆ ಒಳಗೆ ಬಂದಾಗ ಅದೇ ಅಟ್ಟದ ಮೇಲೆ ಹತ್ತುವ ಕೆಲಸವಾಯಿತು. ಮತ್ತೆ ಹತ್ತಿ ಗಂಟು ತೆರೆದು ನೋಡಿದಾಗ ಹಳೆಯ ನೆನಪುಗಳೆಲ್ಲ ಹಾಗೆ ಮತ್ತೆ ಸುರಳಿ ಹೊಡೆಯುವುದಕ್ಕೆ ಆರಂಭವಾದವು. ಒಂದಷ್ಟು ಪ್ರಶ್ನೆಗಳಿಗೆ ಉತ್ತರ ಸಿಕ್ಕಿತು. ಸರಿದಾರಿಗೆ ಮಾರ್ಗ ಸಿಕ್ಕಿತ್ತು. ಕೆಲವೊಂದು ಅವಕಾಶಗಳು ತೆರೆದುಕೊಂಡವು. ಹೊಸ ಪರಿಚಯಗಳು ದಾಖಲಾದವು, ಬದುಕನ್ನ ನಾನು ನೋಡುತ್ತಿದ್ದ ರೀತಿಯೇ ಬದಲಾಗಿ ಹೋಯಿತು. ಅಮ್ಮ ಅವತ್ತು ಗಂಟು ಕಟ್ಟಿದ್ದರ ಫಲ ನನಗೆ ಇವತ್ತು ಸಿಕ್ತು. ನಿಮ್ಮ ಮನೆಯಲ್ಲಿ ಗಂಟುಗಳಿರಬಹುದು. ಒಮ್ಮೆ ತೆರೆದು ನೋಡಿ. ಬದುಕು ಖಂಡಿತ ಬದಲಾಗುತ್ತದೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ