ಸ್ಟೇಟಸ್ ಕತೆಗಳು (ಭಾಗ ೧೨೪೪) - ಕನಸಿನ ದುಡಿಮೆ

ಸ್ಟೇಟಸ್ ಕತೆಗಳು (ಭಾಗ ೧೨೪೪) - ಕನಸಿನ ದುಡಿಮೆ

ದುಡಿಮೆಗೋಸ್ಕರ ತೆಂಗಿನ ಮರ ಏರುತ್ತಾನೆ. ಪ್ರತಿದಿನವೂ ಅವಿರತವಾಗಿ ದೇಹವನ್ನ ದಂಡಿಸಿ ದುಡಿಯುತ್ತಾನೆ. ಮನೆ ತನ್ನ ನಂಬಿದವರ ಜೀವನ ಕಷ್ಟದಲ್ಲಿ ಬೀಳಬಾರದು ಅನ್ನುವ ಕಾರಣಕ್ಕೆ ಬೆವರು ಹರಿಸುತ್ತಾನೆ. ಆದರೆ ಆತನ ಆಸೆಗಳು ದೊಡ್ಡದು. ವೇದಿಕೆಯ ಮೇಲೆ ಮೈಕ್ ಹಿಡಿದರೆ ಸುಲಲಿತವಾಗಿ ಪದಗಳು ಒಂದರ ಹಿಂದೆಂದರಂತೆ ಕೇಳುಗರ ಮನಸೂರೆ ಗೊಳ್ಳುವಂತೆ ಮಾತನಾಡುತ್ತಾನೆ. ಅಭಿನಯಿಸುವುದಕ್ಕೆ ಹೆಜ್ಜೆ ಇಟ್ಟರೆ ಪಾತ್ರವೇ ತಾನಾಗುತ್ತಾನೆ. ಆತನೊಳಗಿನ ಪ್ರತಿಭೆಗೆ ವೇದಿಕೆ ಅವಶ್ಯಕತೆ ಇದೆ. ಆದರೆ ವೇದಿಕೆಗಳು ಎಲ್ಲೋ ಒಂದು ಮೂಲೆಯಲ್ಲಿ. ಈಗಲೂ ಸಂಜೆ ಆದರೆ ವೇದಿಕೆ ಕಾರ್ಯಕ್ರಮಗಳಲ್ಲಿ ಬಿಳಿ ಅಂಗಿ ಪಂಚೆ ಧರಿಸಿದ 45ರ ವಯಸ್ಸಿನ ಯುವಕ ಅದ್ಭುತವಾಗಿ ಮಾತನಾಡುತ್ತಿರುತ್ತಾನೆ.  ಬೆಳಗ್ಗೆಯಾದರೆ ಸಾಕು ತನ್ನ ಶಸ್ತ್ರಾಸ್ತ್ರಗಳನ್ನು ಹಿಡಿದು ತೆಂಗಿನಕಾಯಿ ಕೀಳುವುದಕ್ಕೆ ಮರಗಳನ್ನು ಹುಡುಕುತ್ತಾನೆ .ದೊಡ್ಡ ವೇದಿಕೆ ಕಡೆಗೆ ಸಾಗುವ ಯೋಚನೆ ಇದೆ ಆದರೆ ಬದುಕಿನ ಅನಿವಾರ್ಯತೆ. ಆ ದಿನದ ದುಡಿಮೆ ತನ್ನನ್ನೇ ನಂಬಿದ ಮನೆಯ ಜೀವಗೋಸ್ಕರ ದಿನವೂ ಶ್ರಮವನ್ನೇ ನಂಬಿದ್ದಾನೆ. ಆ ಊರಿನಲ್ಲಿ ಇವನೊಬ್ಬನೆಲ್ಲ ಇಂತಹ ಹಲವು ಮನಸ್ಸುಗಳು ಕನಸುಗಳನ್ನು ಕೊಂದು ಕೆಲಸ ಮಾಡುವುದಕ್ಕೆ ಹೊರಟು ಎಷ್ಟೋ ಶತಮಾನಗಳು ದಾಟಿ ಹೋಗಿದೆ. ಊರಿಗೆ ಬೆಳಕು ಬಂದಿದೆ, ಸರಕಾರ ಬದಲಾಗಿದೆ, ಅಭಿವೃದ್ಧಿಗಳಾಗಿದೆ, ಆದರೆ ಊರಿನಲ್ಲಿ ಕನಸುಗಳನ್ನು ಕಟ್ಟಿ  ಹಾಕಿ ಬದುಕನ್ನ ಸಾಗಿಸುವ ಸ್ಥಿತಿ ಇನ್ನೂ ಕಡಿಮೆಯಾಗಿಲ್ಲ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ