ಸ್ಟೇಟಸ್ ಕತೆಗಳು (ಭಾಗ ೧೨೪೫) - ಕೇಳು

ಇನ್ನಾದರೂ ಅರ್ಥ ಮಾಡಿಕೋ, ಜಗತ್ತಿನಲ್ಲಿ ಹೇಳದೆ ಕೊಡುವವನು ಭಗವಂತ ಮಾತ್ರ ನಾವು ನಮಗೆ ಅಗತ್ಯ ಇರುವುದನ್ನ ಕೇಳಿ ಪಡೆದುಕೊಳ್ಳಲೇಬೇಕು, ನೀನು ಪಡೆದುಕೊಳ್ಳುವುದಕ್ಕೆ ಅರ್ಹನಾಗಿದ್ದೀಯ ಕೇಳುವ ಸಾಮರ್ಥ್ಯವು ನಿನ್ನಲ್ಲಿದೆ ಅಂದಾಗ ಕೇಳದೆ ಇರುವುದು ನಿನ್ನ ತಪ್ಪು. ನೀನು ವೇದಿಕೆಯ ಮೇಲೆ ಹೋಗಿ ಅಭಿನಯಿಸಬೇಕು ಅದಕ್ಕೆ ನಿನ್ನೊಳಗೆ ಶಕ್ತಿ ಸಂಚಯವಾಗಬೇಕು ನೀರು ಆಹಾರ ಪೂರೈಕೆ ಆಗಬೇಕು ಇನ್ನೊಂದಷ್ಟು ಹೆಚ್ಚು ಮನರಂಜನೆಯನ್ನು ನೀಡುವುದಕ್ಕೆ ನಿನಗೆ ಅಗತ್ಯವಾಗಿರುವುದನ್ನು ಕೇಳಿ ಪಡೆದುಕೊಳ್ಳಬೇಕು. ನೀನು ವೇದಿಕೆಯ ಮೇಲೆ ಹೆಚ್ಚು ಸಮಯ ನಿಲ್ಲಬೇಕು ಹೆಚ್ಚು ಜನರನ್ನ ರಂಜಿಸಬೇಕು ಆ ಕಾರಣಕ್ಕೆ ನಿನಗೆ ಅಗತ್ಯವಾಗಿರುವುದನ್ನ ಕೇಳಿ ಪಡೆದುಕೋ. ಸುಮ್ಮನೆ ತಲೆ ತಗ್ಗಿಸಿ ನಿಲ್ಲಬೇಡ. ನೀನು ಮಾಡ್ತಾ ಇರೋದು ಕಲಾ ಸೇವೆ. ಇದಕ್ಕಿಂತ ದೊಡ್ಡದಾದ ಕಾರ್ಯ ಇನ್ನೊಂದಿಲ್ಲ. ನೀನು ಸಣ್ಣವನಲ್ಲ, ನೆರೆದವರನ್ನ ಮನ ಪೂರ್ತಿಯಾಗಿ ನಗುವಂತೆ ಮಾಡ್ತಾ ಇದ್ದೀಯಾ, ಹಾಗಾಗಿ ಕೇಳಿ ಪಡೆದುಕೋ. ಅಪ್ಪ ನಾಟಕಕ್ಕೆ ಹೊರಡುವಾಗ ಹೇಳಿದ ಮಾತು ನನ್ನ ಕಿವಿಯಲ್ಲಿ ಮತ್ತೆ ಮತ್ತೆ ಅನುರಣಿಸುತ್ತಿದೆ. ಆದರೆ ಇನ್ನೂ ಕೂಡ ನನಗೆ ಕೇಳುವ ಧೈರ್ಯ ಬರದೇ ಇರುವುದು ವಿಪರ್ಯಾಸ ಅಲ್ಲವೇ…?
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ