ಸ್ಟೇಟಸ್ ಕತೆಗಳು (ಭಾಗ ೧೨೪೭) - ವೇಶ್ಯೆ

ಸ್ಟೇಟಸ್ ಕತೆಗಳು (ಭಾಗ ೧೨೪೭) - ವೇಶ್ಯೆ

ಆ ದಿನದ ದಿನಪತ್ರಿಕೆ ಆಕೆಯ ಕೈಯಲ್ಲಿತ್ತು. ಪ್ರತಿದಿನವೂ ಸುದ್ದಿಯನ್ನು ಓದುವವಳಿಗೆ ಅದೊಂದು ಸುದ್ದಿ ಯಾಕೋ ಮನಸೊಳಗೆ ಮಾತನಾಡಬೇಕು ಅನ್ನೋದನ್ನ ಮತ್ತೆ ಮತ್ತೆ ಸಾರಿ ಹೇಳ್ತಾ ಇತ್ತು. 8 ತಿಂಗಳ ಪುಟ್ಟ ಕಂದಮ್ಮನ ಮೇಲೆ ಅತ್ಯಾಚಾರ ಮಾಡಿದವನಿಗೆ ಗಲ್ಲು ಶಿಕ್ಷೆ ಘೋಷಣೆಯಾಗಿತ್ತು. ಆಕೆಯ ಕಣ್ಣಲ್ಲಿ ಒಂದು ಕ್ಷಣ ಕಣ್ಣೀರು ಇಳಿದು ರೋಷ ಹೆಚ್ಚಾಗಿ ಸಮಾಜಕ್ಕೊಂದು ಪತ್ರವನ್ನೇ ಬರೆದುಬಿಟ್ಟಳು. "ನಮ್ಮ ಬದುಕು ಮಾರಾಟಕ್ಕೆ ನಿಂತುಬಿಟ್ಟಿದೆ ನಾವು ದೇಹ ಮಾರಿಕೊಳ್ಳುತ್ತೇವೆ, ನಮ್ಮದು ಇದೇ ವೃತ್ತಿಯಾಗಿ ಬಿಟ್ಟಿದೆ. ನಿಮ್ಮೊಳಗೆ ಕಾಮವಾಂಛೆ ಹೆಚ್ಚಿದ್ದರೆ ಬನ್ನಿ ನಮ್ಮ ಪ್ರದೇಶಕ್ಕೆ ಬಂದು ನಿಮ್ಮ ತೀಟೆ ತೀರಿಸಿಕೊಳ್ಳಿ, ಪರಿಚಯವಿಲ್ಲದ ಮಗುವಿನ ಮೇಲೆ, ದಾರಿಯಲ್ಲಿ ಹೊರಟ ಮುಗ್ಧ ಹೆಣ್ಣಿನ ಮೇಲೆ, ಪ್ರೀತಿ ಎನ್ನುವ ಮೋಸದ ಬಲೆಯೊಳಗೆ ಹೀಗೆ ಅಬಲರ ಮೇಲೆ ನಿಮ್ಮ ಶಕ್ತಿಪ್ರಯೋಗ ಮಾಡಿ ನೀವೊಂದು ಅದ್ಭುತ ಅನ್ನಿಸಿಕೊಳ್ಳಬೇಕಾಗಿಲ್ಲ. ನಾವು ನಮ್ಮ ದೇಹವನ್ನು ನಿಮಗೋಸ್ಕರ ನೀಡುತ್ತೇವೆ. ನೀವು ದುಡ್ಡು ನೀಡಬೇಕಾಗಿಲ್ಲ ನಮ್ಮಿಂದಾಗಿ ಒಂದಷ್ಟು ಹೆಣ್ಣು ಮಕ್ಕಳ ಬದುಕು ಚೆನ್ನಾಗಿರುತ್ತೆ ಅಂತಾದ್ರೆ ನಾವು ಈ ಕೆಲಸಕ್ಕೂ ಸಿದ್ಧವಾಗಿದ್ದೇವೆ. ಹೀಗೆ ಬರೆದ ಪತ್ರವನ್ನು ಸಮಾಜದ ಕಡೆಗೆ ಎಸೆದು ಬಿಟ್ಟಿದ್ದಾಳೆ. ಮತ್ತೆ ಕನ್ನಡಿಯ ಮುಂದೆ ನಿಂತು ತನ್ನನ್ನು ನೋಡಿ ಕಣ್ಣೀರು ಇಳಿಸಿಕೊಂಡು ನಗುತ್ತಿದ್ದಾಳೆ. ತನ್ನ ಬದುಕಿನ ಈ ನಿರ್ಧಾರಕ್ಕೆ ತನ್ನದೇ ಕುಟುಂಬ ಕಾರಣವಾಗಿರುವ ವಿಪರ್ಯಾಸವನ್ನು ನೆನೆದು ಸಮಾಜದಿಂದ ಪ್ರತ್ಯುತ್ತರದ ನಿರೀಕ್ಷೆಯಲ್ಲಿ ನಿಂತಿದ್ದಾಳೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ