ಸ್ಟೇಟಸ್ ಕತೆಗಳು (ಭಾಗ ೧೨೪೮) - ಕೇಳಬೇಕಾದ ಮಾತು

ಸ್ಟೇಟಸ್ ಕತೆಗಳು (ಭಾಗ ೧೨೪೮) - ಕೇಳಬೇಕಾದ ಮಾತು

ನಿನಗೆ ಅರ್ಥವಾಗುವುದು ಯಾವಾಗ ಮಾರಾಯ ನಿನಗೆ ಎಷ್ಟೇ ಉದಾರಣೆ ಕೊಟ್ಟು ಹೇಳಿದರೂ ವಿವರಿಸಿದರೂ  ನೀನು ಅದನ್ನು ಆ ಕ್ಷಣಕ್ಕೆ ಒಪ್ಪಿಕೊಂಡು ಮತ್ತೆ ಮರೆತು ಬಿಡ್ತೀಯಾ. ನಿನ್ನಂಥವರಿಗೆ ನಾನು ಯಾವ ರೀತಿಯಲ್ಲಿ ವಿವರಣೆ ಕೊಡ್ತಾ ಹೋಗ್ಲಿ. ನೋಡು ಆಕಾಶದಲ್ಲಿ ಹಕ್ಕಿಗಳು ಸ್ವಚಂದವಾಗಿ ಹಾರಾಡ್ತಾಯಿದ್ದಾವೆ. ಅಷ್ಟು ದೊಡ್ಡ ಆಕಾಶದಲ್ಲಿ ಹಾರುವ ಹಕ್ಕಿಗಳು ಒಂದು ದಿನವು ದಿಕ್ಕು ತಪ್ಪಿಲ್ಲ. ಅದಕ್ಕೆ ದಾರಿಯನ್ನು ಯಾರು ಹಾಕಿ ಕೊಟ್ಟಿಲ್ಲ. ಆದರೆ ತಮಗೆ ಬೇಕಾದ ಕಡೆಗೆ ಹಾರಿ ಬೇಕಾದ ತನ್ನ ಆಹಾರವನ್ನು ಪಡೆದುಕೊಂಡು ತಮ್ಮ ಮನೆಯನ್ನು ತಮ್ಮ ಗುರಿಯನ್ನು ತಲುಪುತ್ತವೆ. ಎಲ್ಲೋ ಹುಟ್ಟಿದ ನೀರಿನ ಹನಿ ತಾನೇ ದಾರಿ ಹುಡುಕಿ ಹುಡುಕಿ ಸಮುದ್ರವನ್ನು ಸೇರುತ್ತದೆ ಮೊದಲು ನೀನು ಗುರಿ ತಲುಪುವುದಕ್ಕೆ ಸರಿಯಾದ ನಕ್ಷೆಯನ್ನು ಸಿದ್ಧಪಡಿಸು. ಇಲ್ಲವಾದರೆ ಎಲ್ಲೆಂದರಲ್ಲಿ ಚಲಿಸಿ ಚಲಿಸಿ ಕೊನೆಗೂ ಗುರಿ ತಲುಪದೇ ಹಾಗೆ ಉಳಿದು ಬಿಡ್ತೀಯ ಇನ್ನಾದ್ರೂ ನೀನು ಬದಲಾಗ್ತೀಯಾ ಅಂತ ಅಂದುಕೊಳ್ಳುವುದು ನನ್ನ ಮೂರ್ಖತನ. ಆದರೆ ನಾನು ಹೇಳುವುದನ್ನ ಯಾವತ್ತೂ ನಿಲ್ಲಿಸುವುದಿಲ್ಲ.

ಅಪ್ಪ ತುಂಬಾ ಯಾತನೆಯಿಂದ ಇದೇ ಮಾತನ್ನ ನನ್ನಲ್ಲಿ ಹೇಳಿ ಸುಮ್ಮನಾಗಿ ಬಿಟ್ಟರು ಅವರಿಗೆ ತಿಳಿದಿತ್ತು ಮತ್ತೊಮ್ಮೆ ಹೊಸ ಮಾತನ್ನು ಇವನಿಗೆ ಹೇಳಲೇಬೇಕು ಅಂತ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ