ಸ್ಟೇಟಸ್ ಕತೆಗಳು (ಭಾಗ ೧೨೪೯) - ಪರಿಚಯ

ನಿನಗೆ ಸರಿಯಾಗಿ ಗೊತ್ತಿಲ್ಲ. ನೀನು ಎಲ್ಲಿಗೆ ತಲುಪಬೇಕು ಅಂತಂದ್ರೆ ನಿನ್ನ ಪರಿಚಯ ಮಾಡಿಕೊಡದೆ ನೀನು ಪರಿಚಯವಾಗಬೇಕು. ಅದು ನಿನ್ನ ನಿಜವಾದ ಸಾಧನೆ. ಯಾವುದೋ ವೇದಿಕೆ ಕಾರ್ಯಕ್ರಮದಲ್ಲಿ ಹೋಗುತ್ತಿರುವ ದಾರಿಯಲ್ಲಿ ಹೊಸ ವ್ಯಕ್ತಿಯ ಭೇಟಿಯಲ್ಲಿ ಹೀಗೆ ಎಲ್ಲೇ ಆದರೂ ಕೂಡ ಎದುರಿಗಿದ್ದ ವ್ಯಕ್ತಿ ನಿನ್ನ ಬಗ್ಗೆ ಕೇಳಿ ನಿನ್ನಲ್ಲೇ ಕೇಳಿ ತಿಳಿದುಕೊಳ್ಳುವಂತಾಗಬಾರದು, ನೀನು ಆತನನ್ನ ಭೇಟಿಯಾದ ಕ್ಷಣದಲ್ಲಿ ನೀನ್ಯಾರೆನ್ನುವುದು ಆತನಿಗೆ ಪೂರ್ತಿಯಾಗಿ ತಿಳಿದಿರಬೇಕು. ನಿನ್ನ ಸಾಧನೆಗಳೇನು? ನಿನ್ನ ದಾರಿಗಳ್ಯಾವುದು? ನಿನ್ನ ವೈಚಾರಿಕತೆಯ ನಿಲುವೇನು? ಎಲ್ಲವೂ ಆತನಿಗೆ ಅರ್ಥವಾಗುತ್ತಲ್ಲ ಅದು ನಿಜವಾದ ಸಾಧನೆ. ಜಗತ್ತಿಗೆ ಪರಿಚಯವಾಗುವವರೆಗೆ ನೀನು ಬೆಳೆಯುತ್ತಾ ಹೋಗಬೇಕು. ಹಾಗೆ ಪ್ರತಿಯೊಬ್ಬರೂ ಯೋಚನೆ ಮಾಡಿ ಹೆಜ್ಜೆಗಳನ್ನು ಇಟ್ಟರೆ ಈ ಜಗತ್ತೊಂದು ಅದ್ಭುತ ನಿಲ್ದಾಣವಾಗುತ್ತೆ .ಎಲ್ಲರೂ ಅದೇ ನಿಲ್ದಾಣದಲ್ಲಿ ಹಾದು ಹೋಗುವಾಗ ಪರಿಚಯಸ್ಥರಾಗಿ ಬಿಡುತ್ತಾರೆ. ನೀನೀಗ ಜಗತ್ತಿಗೆ ಪರಿಚಯವಾಗುವುದರ ಕಡೆಗೆ ಸಾಗಬೇಕಾಗಿದೆ ಕಾಯುವುದಕ್ಕೆ ಸಮಯವಿಲ್ಲ. ಹೆಜ್ಜೆಗಳನ್ನು ಇಟ್ಟು ಮುಂದುವರೆ. ಅರ್ಥವಾಗಿಲ್ಲವಾದರೆ ಮತ್ತೆ ಮೊದಲಿನಿಂದ ಇದೇ ಮಾತನ್ನು ಹೇಳುತ್ತೇನೆ. ಹಲವು ಸಮಯದ ನಂತರ ಸಿಕ್ಕ ನನ್ನ ಪ್ರಾಥಮಿಕ ಶಾಲೆಯ ಮಾಸ್ತರು ಹೇಳಿದ ಮಾತು ಯಾಕೋ ತುಂಬಾ ಮೌಲ್ಯದ್ದು ಅಂತ ಅನ್ನಿಸಿ ಮತ್ತೆ ಅದೇ ಮಾತನ್ನ ಮನನ ಮಾಡಿಕೊಳ್ಳಲು ಆರಂಭಿಸಿದೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ