ಸ್ಟೇಟಸ್ ಕತೆಗಳು (ಭಾಗ ೧೨೫೦) - ನೆಲ್ಲಿದಡಿ

ಈ ನೆಲದ ನಂಬಿಕೆಯೊಂದು ಕಾಯುತ್ತಿತ್ತು. ಈ ನೆಲಕ್ಕೆ ಕಾಲಿಟ್ಟಾಗ ಜನರೊಳಗೆ ಬಾಂಧವ್ಯ ಗಟ್ಟಿಯಾಗಿತ್ತು, ಒಬ್ಬರನ್ನೊಬ್ಬರು ಆಧರಿಸಿಕೊಂಡಿದ್ದರು, ಎಲ್ಲರೂ ಪ್ರೀತಿ ಒಂದೇ ಧ್ಯೇಯ ಮಂತ್ರವಾಗಿ ಬದುಕುತ್ತಿದ್ದರು. ಜಾತಿ ದ್ವೇಷಗಳ ಇಲ್ಲದ ಅದ್ಭುತ ಲೋಕ ಸೃಷ್ಟಿಯಾಗಿತ್ತು. ಹಾಗಾಗಿ ಈ ಸ್ಥಳದಲ್ಲಿ ಉಳಿಯಬೇಕು ಅನ್ನೋದನ್ನ ನಿಶ್ಚಯ ಮಾಡಿಕೊಂಡು ಉಳಿಪಾಡಿ ಅನ್ನುವಂತಹ ಪ್ರದೇಶದಲ್ಲಿ ನೆಲೆಯಾಯಿತು. ಆದರೆ ಕಾಲಕ್ರಮೇಣ ಕಳೆದಂತೆ ತನಗೆ ಬೇಕಾಗಿರುವ ಎಲ್ಲ ಸೇವೆಗಳನ್ನು ಸ್ವೀಕರಿಸುತ್ತಾ ಅದ್ಭುತವಾಗಿ ಬೆಳಗ್ತಾ ಇತ್ತು. ಮುಂದಾಗುವುದರ ಸೂಚನೆಯೂ ದೈವಕ್ಕೆ ಇತ್ತು. ಮರೆತವರಿಗೆ ಎಚ್ಚರಿಸಲು, ಜನರನ್ನ ಒಗ್ಗೂಡಿಸುವುದಕ್ಕೆ ಶಕ್ತಿ ಕಾಯುತ್ತಿತ್ತು. ಈ ನೆಲದ ಜನರನ್ನು ಉಳಿಸಿಕೊಳ್ಳುವುದಕ್ಕೆ ಅವರೊಳಗೆ ಶಕ್ತಿಯನ್ನ ಮತ್ತೆ ಸಂಚಯ ಮಾಡಿಕೊಳ್ಳುವುದಕ್ಕೆ .ಈ ನೆಲದಲ್ಲಿ ಉಳಿಯುತ್ತೇನೆ ಎನ್ನುವ ಅಭಯದ ನುಡಿಯನ್ನು ಹೇಳಿತ್ತು ಶಕ್ತಿ. ಯಾರೋ ದೊಡ್ಡವರು ದುಡ್ಡಿನ ಮದದಿಂದ ಅಭಿವೃದ್ಧಿ ಅನ್ನುವ ಹೆಸರಲ್ಲಿ ಶಕ್ತಿಯನ್ನ ಮಣ್ಣೊಳಗೆ ಹೂತು ಹಾಕುವ ಕೆಲಸ ಮೂಲೆಯಲ್ಲಿ ನಡಿತಾ ಇದ್ದದ್ದು ಈ ಶಕ್ತಿಗೂ ತಿಳಿದಿತ್ತು. ಆದರೆ ಅದು ಜಗತ್ತಿಗೆ ಪರಿಚಯವಾಗಬೇಕು ಅನ್ನುವ ಕಾರಣಕ್ಕೆ ದಿನವನ್ನ ಗೊತ್ತು ಮಾಡಿ ಜನರನ್ನು ಒಗ್ಗೂಡಿಸುವ ಕೆಲಸ ಪ್ರಾರಂಭ ಮಾಡಿತು. ಜನರು ಒಗ್ಗೂಡಿದರು .ಅರ್ಥವಿಲ್ಲದ ಅಭಿವೃದ್ಧಿಯನ್ನು ದಿಕ್ಕರಿಸಿ ಮತ್ತೆ ಎಲ್ಲರೂ ಕೈ ಮುಗಿದು ಜೊತೆಗೆ ನಿಂತು ಶಕ್ತಿಯನ್ನ ನಂಬುವುದ್ದಕ್ಕೆ ತಯಾರಾದರೂ... ಶಕ್ತಿಯೂ ಒಳಗೆ ನಗುತ್ತಾ ಹರಸಿತು. ನಂಬಿಕೆಗೆ ಗೆಲುವಾಯಿತು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ