ಸ್ಟೇಟಸ್ ಕತೆಗಳು (ಭಾಗ ೧೨೫೭) - ಮಹಿಳಾ ದಿನಾಚರಣೆ

ಅಮ್ಮನಿಗೆ ಇವತ್ತು ಮಹಿಳಾ ದಿನಾಚರಣೆ ಅಂತ ದೇವರಾಣೆ ಗೊತ್ತಿಲ್ಲ. ನಾನದನ್ನ ಅಮ್ಮನ ಬಳಿ ಕುಳಿತು ಹೇಳಿ ಅವರನ್ನು ತಬ್ಬಿಕೊಂಡು ಆಶೀರ್ವಾದ ಪಡೆದು ಕೈ ಕುಲುಕಿಸಿ ಹೇಳಿದರು ಕೂಡ ಅಮ್ಮ ಅದನ್ನ ಯಾವುದನ್ನು ತಲೆಗೆ ಹಾಕಿ ಕೊಂಡ್ಲಿಲ್ಲ ಅವಳು ಎಂದಿನಂತೆ ಬೆಳಗ್ಗೆ ಬೇಗ ಎದ್ದು ಮನೆ ಕೆಲಸ ಮುಗಿಸಿ ದನದ ಕೊಟ್ಟಿಗೆಗೆ ಹೋಗಿ ಅವುಗಳ ಜೊತೆ ಮಾತನಾಡಿ ಹಾಲು ಕರೆದು ಅದನ್ನು ಪೇಟೆಯಲ್ಲಿ ಕೊಟ್ಟು ಮತ್ತೆ ಮನೆಗೆ ಬಂದು ತಿಂಡಿ ಚಹಾ ತಯಾರು ಮಾಡಿ ಬಟ್ಟೆ ಒಗೆದು ದನಗಳಿಗೆ ಹುಲ್ಲು ತರೋಕೆ ತೋಟಕ್ಕೆ ಹೋಗಿ ಹುಲ್ಲು ತಂದು ನೀರು ಕಾಯಿಸಿ ಮಧ್ಯಾನದ ಊಟಕ್ಕೆ ತಯಾರು ಮಾಡಿ ಕಟ್ಟಿಗೆ ಒಡೆದು ಮನೆಯ ಅಂಗಳ ಸ್ವಚ್ಛ ಮಾಡಿ ಹೂವಿನ ಗಿಡಗಳಿಗೆ ನೀರು ಹಾಕಿ ಗೊಬ್ಬರದ ಗುಂಡಿಯ ಸರಿಮಾಡಿ ತುಂಡಾಗಿದ್ದ ಬಟ್ಟೆ ಹಾಕುವ ಹಗ್ಗವನ್ನು ಕಟ್ಟಿ, ನಾನಿವತ್ತು ಕಾಲಿಗೆ ಬಿದ್ದದ್ದಕ್ಕೆ ವಿಶೇಷವಾಗಿ ಪಾಯಸ ಮಾಡಿ, ಮಧ್ಯಾಹ್ನ ಊಟ ಮಾಡಿ ಐದು ನಿಮಿಷ ತಲೆಯನ್ನು ಗೋಡೆಗೆ ಒರಗಿಸಿ ಮತ್ತೆ ಎದ್ದು ದನಕ್ಕೆ ನೀರು ಹುಲ್ಲು ಹಿಂಡಿ ಕೊಟ್ಟು ಹಾಲು ಕರೆದು ಮತ್ತದನ್ನ ಪೇಟೆಯಲ್ಲಿ ಕೊಟ್ಟು ಮನೆಗೆ ಬಂದು ತೋಟಕ್ಕೆ ಹೋಗಿ ಹುಲ್ಲು ತಂದು ಸಂಜೆಯ ಚಹಾ ತಿಂಡಿ ತಯಾರು ಮಾಡಿ ನಮ್ಮೊಂದಿಗೆ ಆಗೋಈಗೋ ಮಾತನಾಡುತ್ತಾ, ರಾತ್ರಿಯ ಅಡುಗೆಯನ್ನು ಸಿದ್ಧತೆ ಮಾಡಿ ಆಗಾಗ ಹಾದು ಹೋಗುವಾಗ ಟಿವಿಯಲ್ಲಿ ಬರುವ ಧಾರಾವಾಹಿಗಳನ್ನ ಕೆಲವು ಕ್ಷಣ ನೋಡಿ, ಬಾವಿಯಿಂದ ನೀರು ಸೇರಿ ನೆಲ ಗುಡಿಸಿ ಒರೆಸಿ ಮಲಗುವುದಕ್ಕೆ ಚಾಪೆ ಹಾಸುವಾಗ ಗಂಟೆ ರಾತ್ರಿ ಹತ್ತಾಗಿತ್ತು. ಮತ್ತೊಂದು ಐದು ನಿಮಿಷ ನಮ್ಮಲ್ಲಿ ಮಾತನಾಡಿ ನಾಳೆ ಬೆಳಗ್ಗೆಗೆ ಏನೆಲ್ಲ ಮಾಡಬೇಕು ಅನ್ನೋದನ್ನ ಯೋಚನೆ ಮಾಡಿ ಹಾಗೆ ದಿಂಬಿಗೆ ತಲೆ ಒರಗಿಸಿ ಬಿಟ್ಟಳು. ಅವಳ ಜೀವನದಲ್ಲಿ ಮಹಿಳಾ ದಿನಾಚರಣೆ ಅದೇನು ದೊಡ್ಡದು ಅಂತ ಅನ್ನಿಸಲೇ ಇಲ್ಲ. ಒಂದು ದಿನ ಅಮ್ಮ ಅವಳಿಗಿಷ್ಟ ಬಂದಂತೆ ಇರಬೇಕು ಏನೋ ಕೆಲಸ ಮಾಡದೆ ಆರಾಮಾಗಿ ಓಡಾಡ್ತಾ ಖುಷಿ ಪಡಬೇಕು ಅಂತ. ಅದನ್ನಲ್ಲಿ ಅಮ್ಮನಲ್ಲಿ ಹೇಳಿದೆ ಕೂಡ ಆದರೆ ಅಮ್ಮ ನನ್ನ ನೋಡಿ ನಕ್ಕು ಅದು ನನಗೆ ಯಾವತ್ತೂ ಇಷ್ಟ ಅಲ್ಲ. ನಾನು ಪ್ರತಿದಿನ ಹೇಗೆ ಬದುಕ್ತಾ ಇದೀನಲ್ಲ ಅದೇ ನನ್ನ ಇಷ್ಟ ಅಂತಂದು ನಿದ್ದೆಗೆ ಜಾರಿಬಿಟ್ಟಳು. ಹಾಗಾಗಿ ಅಂತಹ ತಾಯಿಗೆ ಒಂದುದಿನ ವಿಶ್ವ ಮಹಿಳಾ ದಿನಾಚರಣೆಯ ಶುಭಾಶಯಗಳನ್ನು ಹೇಳಿಬಿಟ್ಟರೆ ಮಹಿಳಾ ದಿನಾಚರಣೆ ಸಾರ್ಥಕ್ಯವಾಗುತ್ತೋ ?
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ