ಸ್ಟೇಟಸ್ ಕತೆಗಳು (ಭಾಗ ೧೨೫೮) - ಅವಳು ವಿಸ್ಮಯ

ಸ್ಟೇಟಸ್ ಕತೆಗಳು (ಭಾಗ ೧೨೫೮) - ಅವಳು ವಿಸ್ಮಯ

ಅವಳ ನಿರ್ಧಾರದ ಮುಂದೆ ನಮ್ಮದೇನಿದೆ? ಆಕೆ ಹೇಗಿರಬೇಕು? ಹೇಗೆ ವರ್ತಿಸಬೇಕು? ಯಾರ ಜೊತೆಯಿರಬೇಕು ಯಾರನ್ನ ಹಚ್ಚಿಕೊಳ್ಳಬೇಕು? ಯಾರನ್ನ ದೂರವಿಡಬೇಕು ಹೀಗೆ ಎಲ್ಲವನ್ನು ನಿರ್ಧರಿಸುವ ಸಾಮರ್ಥ್ಯ ಅವಳಿಗಿದೆ. ಅವಳೇ ಅದನ್ನ ನಿರ್ಧರಿಸಿ ಹಾಗೆ ಬದುಕುತ್ತಾಳೆ ಕೂಡ. ಕೆಲವೊಂದು ಸಲ ಅವಳು ನಮಗೆ ಅರ್ಥವಾಗದ ವಿಸ್ಮಯದ ರೀತಿ ಕಾಣುತ್ತಾಳೆ. ಅವಳಿಗೆ ತುಂಬಾ ಚೆನ್ನಾಗಿ ಗೊತ್ತಿದೆ ಯಾರಿಗೆ ಎಷ್ಟು ಧಕ್ಕಬೇಕು, ಯಾರಿಗೆ ಹೇಗೆ ಅರ್ಥವಾಗಬೇಕು ಹಾಗೆ ಮಾತ್ರ ಅರ್ಥವಾಗುತ್ತಾಳೆ. ಅವಳ ವರ್ತನೆಯನ್ನು ನೋಡಿ ಅವಳು ಹೀಗೆ ಎಂದು ನೀವಂದುಕೊಂಡರೆ ಅದು ನಿಮ್ಮ ತಪ್ಪು. ಅವಳು ರೂಪಿಸಿದ ಚೌಕಟ್ಟಿನೊಳಗಷ್ಟೇ ನಾವು ಬದುಕುತ್ತಾ ಇರುತ್ತೇವೆ. ಹಾಗಾಗಿ ಅವಳ ಚೌಕಟ್ಟಿನೊಳಗೆ ಇದ್ದುಬಿಡುವುದೇ ಲೇಸು. ಅವಳ ಚೌಕಟ್ಟನ್ನು ಮೀರಿ ವರ್ತಿಸಿದರೆ ನಾವು ಅವಳ ಪರಿದಿಯೊಳಗೆ ಬರುವುದಿಲ್ಲ. ನೀವು ಅವಳ ಬದುಕಿನ ಭಾಗವಾಗಬೇಕಾದರೆ ಅವಳ ಚೌಕಟ್ಟನ್ನ ಒಪ್ಪಿ ಹಾಗೆ ಮುಂದುವರಿಯುವುದು ಒಳಿತು. ಅವಳು ಕೊನೆಯವರೆಗೂ ನಿಮಗೆ ವಿಸ್ಮಯದ ಪೆಟ್ಟಿಗೆಯಾಗಿ ಉಳಿದುಬಿಡುತ್ತಾಳೆ. ಅದನ್ನ ಹಾಗೆ ಒಪ್ಪಿಕೊಂಡು ಮುಂದುವರೆದು ಬಿಡಿ ತೆರೆದು ನೋಡುವ ಮೂಢತನ ಬೇಡ. ಅರ್ಥವಾಗದ ಅವನ ಅಮ್ಮನ ಬಗ್ಗೆ ಯೋಚಿಸುತ್ತ ಆತ ಬರೆದ ದೊಡ್ಡ ಪತ್ರ ಅವನ ಮನೆಯ ಗೋಡೆಯಲ್ಲಿ ರಾರಾಜಿಸುತ್ತಿತ್ತು. ಆತ ಮನೆಯಲ್ಲಿ ಇರಲಿಲ್ಲ ಹಾಗಾಗಿ ಆ ಪತ್ರವನ್ನು ನಿಮ್ಮ ಮುಂದಿಟ್ಟು ಬಿಟ್ಟೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ