ಸ್ಟೇಟಸ್ ಕತೆಗಳು (ಭಾಗ ೧೨೫೯) - ಅಂತ್ಯವಲ್ಲ

ಅವನು ಆ ಕೋಣೆಯ ಕೊನೆ ತಲುಪಿದ್ದಾನೆ ಅಷ್ಟೇ, ಅಲ್ಲೇ ಕುಳಿತು ಇನ್ನು ಮುಂದೆ ಈ ಕೋಣೆಯನ್ನು ತೊರೆದು ಹೊರ ಹೋಗಬೇಕಲ್ಲಾ ಹೊರ ಹೋಗುವ ದಾರಿ ಅಂತ ಬರೆದ ಬಾಗಿಲನ್ನು ತೆರೆದು ಹೆಜ್ಜೆ ಇಡಬೇಕಲ್ಲಾ ಮುಂದೇನೋ ಹೇಗೋ ಅಂತ ನೊಂದು ಬಿಟ್ಟಿದ್ದಾನೆ. ಆತನಿಗೆ ಈ ಸ್ಥಳವನ್ನು ಬಿಟ್ಟು ಹೋಗೋಕೆ ಮನಸ್ಸಿಲ್ಲ. ಆತ ಈ ಕೋಣೆಗೆ ಒಪ್ಪಿಕೊಂಡಿದ್ದಾನೆ. ಇದರಲ್ಲಿ ಜೀವನವನ್ನು ಅದ್ಭುತವಾಗಿ ರೂಪಿಸಿಕೊಳ್ಳಬೇಕು ಅಂತ ಅಂದುಕೊಂಡಿದ್ದಾನೆ. ಆತನಿಗೆ ಹತ್ತಿರ ಕರೆದು ಅವನ ಪ್ರೀತಿಯ ಮೇಷ್ಟ್ರು ತುಂಬಾ ಪ್ರೀತಿಯಿಂದ ಹೇಳಿದರು, ನೋಡು ಈ ಬಾಗಿಲು ತೆರೆದ ಕೂಡಲೇ ನೀನು ಇನ್ನೊಂದು ಯಾವುದೋ ಹೊಸ ಆರಂಭಕ್ಕೆ ಹೆಜ್ಜೆ ಇಡ್ತೀಯಾ. ಅದ್ಯಾವುದೂ ಕೂಡ ನಿನ್ನನ್ನ ಕತ್ತಲ ಕೋಣೆಗೆ ತಳ್ಳುವುದಿಲ್ಲ. ಅದು ಇನ್ನೊಂದರ ಆರಂಭವಾಗಿರುತ್ತೆ. ನಿನಗಲ್ಲಿ ಇದಕ್ಕಿಂತ ದೊಡ್ಡ ಅವಕಾಶ ಸಿಗುತ್ತೆ. ಯಾವುದು ಅಂತ್ಯ ಅನ್ನೋದಿಲ್ಲ ಹೊಸ ಆರಂಭಕದೊಂದು ಮುನ್ನುಡಿ ಆಗಿರುತ್ತೆ. ಇದರೊಳಗೆ ಎದ್ದು ಇಷ್ಟಕ್ಕೆ ಪರಿಚಯವಾಗಿ ಇದೇ ಗಾಳಿಯನ್ನು ಉಸಿರಾಡ್ತಾ ಉಸಿರಾಡ್ತಾ ಕೊನೆಗೊಂದಿನ ಆಮ್ಲಜನಕ ಕಳೆದುಕೊಳ್ಳುತ್ತಿಯಾ. ಹಾಗಾಗಿ ಹೊರಗಡೆ ಹೋಗು. ಇನ್ನೊಂದಷ್ಟು ಹೊಸ ಉಸಿರಿಗೆ ಅವಕಾಶ ಸಿಗುತ್ತೆ. ನೀನು ಹೆಚ್ಚು ಜನರಿಗೆ ಕಾಣಿಸಿಕೊಳ್ತಿಯ. ನಿನಗೆ ಹೊಸ ಮುಖಗಳು ಪರಿಚಯವಾಗುತ್ತೆ. ನೀನು ಮಾಡಬೇಕಾಗಿರುವುದು ಇದನ್ನೇ. ಅವರ ಮಾತು ಕೇಳಬೇಕೋ ಸುಮ್ಮನಿರಬೇಕೋ ಅರ್ಥವಾಗದೆ ಇನ್ನೂ ಅಳುತ್ತಾನೆ ಇದ್ದಾನೆ. ನೀವೇನು ಹೇಳ್ತಿರಿ ಇವನ ಈ ಭಾವಕ್ಕೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ