ಸ್ಟೇಟಸ್ ಕತೆಗಳು (ಭಾಗ ೧೨೬೦) - ಯಾರಂತಾಗಬೇಕು?

ಕಣ್ಣ ಮುಂದೆ ಕಾಣಸಿಗುವ ಎಲ್ಲರೂ ಕೂಡ ಅವರಂತಾಗುವುದಕ್ಕೆ ಕೇಳಿಕೊಳ್ಳುತ್ತಿದ್ದಾರೆ. ನಾನು ಯಾರಂತಾಗಬೇಕು? ಮನೆ ಅಂಗಳದಲ್ಲಿ ನಿಂತ ಮರ ನಾನು ಕಾಲಕ್ಕೆ ತಕ್ಕ ಹಾಗೆ ಬದಲಾಗ್ತೇನೆ, ಬೇರನ್ನಾಳಕ್ಕಿಳಿಸಿ ಜಗತ್ತಿಗೆ ಉಳಿತನ್ನ ನೀಡುತ್ತೇನೆ ನೀನು ಹೀಗಾಗಬೇಕು ಅನ್ನುತ್ತದೆ. ಮನೆ ಮುಂದೆ ಕಟ್ಟಿರುವ ನಾಯಿ ಒಂದಷ್ಟು ನಿಯತ್ತಿನಿಂದ ಬದುಕಬೇಕು ಕೆಲಸವನ್ನ ಚಾಚು ತಪ್ಪದೆ ಮಾಡಬೇಕು ಎನ್ನುತ್ತೆ. ಆಗಾಗ ಕಚ್ಚಿ ತೊಂದರೆ ಕೊಡುವ ಇರುವೆ ಭವಿಷ್ಯಕ್ಕೆ ಬೇಕಾಗಿರುವುದನ್ನ ಈಗಲೇ ತಯಾರು ಮಾಡಿಟ್ಟುಕೋಬೇಕು ಶಿಸ್ತನ್ನು ಅಳವಡಿಸಿಕೊಳ್ಳಬೇಕು ಅನ್ನುತ್ತೆ. ಗಾಳಿ ಬಂದಾಗ ಎಲ್ಲೆಂದಿರಲ್ಲಿ ಓಡಾಡುವ ಮೋಡ ಅವಕಾಶ ಬಂದಾಗ ಅಗತ್ಯ ಇರೋ ಕಡೆ ಸಾಗಿ ಬಿಡಬೇಕು ಅನ್ನುತ್ತೆ. ನೇರವಾಗಿ ಎತ್ತರಕ್ಕೆ ಬೆಳೆದು ನಿಂತ ತೆಂಗಿನ ಮರ ಕೆಡುಕೆಲ್ಲವನ್ನ ಬುಡಕ್ಕೆ ಹಾಕಿಕೊಂಡು ಒಳಿತನ್ನು ಮಾತ್ರ ಎಲ್ಲರಿಗೂ ನೀಡುವುದನ್ನ ಕಲಿಬೇಕು ಹೀಗೆ ಎಲ್ರೂ ಕೂಡ ಅವರಂತಾಗೋದಕ್ಕೆ ನನ್ನಲ್ಲಿ ಬೇಡಿಕೆ ಇಟ್ಟಿದ್ದಾರೆ. ನಾನು ಯಾರಂತಾಗಬೇಕು ಎಲ್ಲರಿಂದಲೂ ಬೇಕಾದನ್ನ ಪಡೆದುಕೊಂಡು ನನ್ನಂತಾಗಿ ಇರಬೇಕಾ ಅಥವಾ ಅವರಲ್ಲಿ ಯಾರೋ ಒಬ್ಬನಾಗಿ ಬಿಡಬೇಕಾ ಪ್ರಶ್ನೆಯೊಂದಿಗೆ ಉತ್ತರದ ನಿರೀಕ್ಷೆಯಲ್ಲಿದ್ದೇನೆ
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ