ಸ್ಟೇಟಸ್ ಕತೆಗಳು (ಭಾಗ ೧೨೬೧) - ಸಮಯದ ಬೈಗುಳ

ಸ್ಟೇಟಸ್ ಕತೆಗಳು (ಭಾಗ ೧೨೬೧) - ಸಮಯದ ಬೈಗುಳ

ಗಡಿಯಾರಕ್ಕೆ ನನ್ನ ನೋಡಿ ನೋಡಿ ರೋಸಿ ಹೋಗಿರಬೇಕು ಅನ್ನಿಸುತ್ತದೆ. ಅದಕ್ಕೆ ಇವತ್ತು ಮನೆಯೊಳಗೆ ಕಾಲಿಟ್ಟ ತಕ್ಷಣ ಕೆಳಗಿಳಿದು ಬಂದು ರಪ ರಪನೆ ನನ್ನ ಕೆನ್ನೆ ಮೇಲೆ ಬಾರಿಸಿತು. ನಾನು ಯಾಕೆ ಎಂದು ಪ್ರಶ್ನೆ ಮಾಡುವ ಹಾಗೆ ಇರಲಿಲ್ಲ ಯಾಕೆಂದರೆ ಹಲವು ಸಮಯದಿಂದ ಗಡಿಯಾರ ನನ್ನ ಬಳಿ  ಹೇಳ್ತಾ ಇತ್ತು, ನೀನು ತಪ್ಪು ಮಾಡ್ತಾ ಇದ್ದೀಯಾ ಅನಗತ್ಯವಾಗಿ ನನ್ನನ್ನು ವ್ಯರ್ಥ ಮಾಡ್ತಾ ಇದ್ದೀಯಾ ಸರಿಯಾಗಿ ಬಳಸಿಕೋ ಅಂತ ಎಷ್ಟು ಸಲ ಹೇಳಿದ್ರು ನಾನು ಅದರ ಮಾತನ್ನ ಕೇಳಿರಲಿಲ್ಲ. ಅದಲ್ಲದೆ ಇವತ್ತು ಗಡಿಯಾರಕ್ಕೆ ಸಿಟ್ಟು ಬರುವುದಕ್ಕೆ ಕಾರಣ ಅದರ ಬಾಯಿಯಲ್ಲಿ ಕೇಳಬೇಕು ನೀವು "ನಿನಗೆ ಎಷ್ಟು ಸಲ ಹೇಳಿದೆ ನನ್ನನ್ನು ಬಳಸಿಕೊಳ್ಳುವುದರಲ್ಲಿ ತಪ್ಪಿಲ್ಲ ಆದರೆ ನೀನು ಈ ಸಮಯವನ್ನು ಬಳಸ್ತಾ ಬಳಸ್ತಾ ಸಮಯವನ್ನ ಯಾರಿಗೋಸ್ಕರ ಬಳಸ್ತಾಯಿದ್ದೀಯಾ? ಊರವರಿಗೆ ಸಿಕ್ಕವರಿಗೆ ಬಳಸುವುದರ ಬದಲು ಅದನ್ನ ನಿನ್ನ ವೈಯಕ್ತಿಕವಾಗಿ ಬಳಸಿದ್ರೆ ನೀನು ಇವತ್ತು ಎಲ್ಲೋ ಹೋಗಿರಬಹುದು .ಆದರೆ ನೀನು ಅದ್ಯಾವುದೂ ಮಾಡದೆ ಅನಗತ್ಯವಾಗಿ ಸಮಯವನ್ನ ಹಂಚಿ ಹಂಚಿ ನೀನು ಬರಿಯ ನಡೆದಾಟದಲ್ಲಿ ಸಾಗಿದ್ದೀಯಾ? ತಲುಪಬೇಕಾದ ಗುರಿಯ ಬಗ್ಗೆ ದೊಡ್ಡ ದೊಡ್ಡ ಮಾತುಗಳನ್ನ ಆಡ್ತಿಯ ಬರೆದಿಡುತ್ತೀಯ ಎಲ್ಲವನ್ನು ಮಾಡ್ತೀಯಾ ಆದರೆ ನಾ ತಿರುಗುವ ಗಡಿಯಾರದ ಪ್ರತಿ ಮುಳ್ಳಿನ ಪ್ರತಿ ನಿಮಿಷವನ್ನು ಕೂಡ ನೀನು ಅಳೆದು ತೂಗಿ ವ್ಯವಹರಿಸ್ತಾ ಇಲ್ಲ... ಮಾತು ಜೋರಾಗಿ ಇತ್ತು. ನಾನು ಸ್ಥಬ್ದನಾಗಿ ನಿಂತು ಬಿಟ್ಟೆ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ