ಸ್ಟೇಟಸ್ ಕತೆಗಳು (ಭಾಗ ೧೨೬೨) - ಹೊಟ್ಟೆ ಉರಿ

ನನಗೆ ಹೊಟ್ಟೆ ಉರಿತಾ ಇದೆ. ಅವನು ಹೇಗೆ ಬದುಕನ್ನ ಅಷ್ಟು ಚೆನ್ನಾಗಿ ಪ್ರೀತಿಸ್ತಾ ಇದ್ದಾನೆ. ಆ ರಸ್ತೆಯಲ್ಲಿ ನಡೆದುಹೋಗುವಾಗಲೇ ಕಿರಿಕಿರಿಯಾಗುತ್ತೆ, ಆತ ಸ್ಟೇರಿಂಗ್ ತಿರುಗಿಸುವವನು, ಗೇರ್ ಹಾಕ್ಬೇಕು, ಎಕ್ಸಲೆಟರ್ ಒತ್ತ ಬೇಕು, ಬ್ರೇಕ್ ಅದುಮಬೇಕು, ಪ್ರತಿಯೊಂದನ್ನು ಕ್ಷಣಕ್ಕೆ ಬದಲಾಯಿಸಬೇಕು, ಆ ಧೂಳಿನ ನಡುವೆ ಮದ್ಯಾಹ್ನದ ಹೊತ್ತು ಖಾರ ಬಿಸಿಲಿಗೆ ಜಾಗರೂಕತೆಯಿಂದ ವಾಹನ ಚಲಾಯಿಸಬೇಕು. ಪ್ರತಿದಿನವೂ ಅದೇ ದಾರಿ ಅದೇ ಬಸ್ಸು ಅದೇ ಹೊಂಡ ಗುಂಡಿಗಳು. ಇದೆಲ್ಲವನ್ನು ನೋಡಿದಾಗ ಎಂತವನಿಗೂ ಕಿರಿಕಿರಿಯಾಗುವುದು ಸಹಜ. ಆದರೆ ಆತ ಇದ್ಯಾವುದನ್ನು ಅಷ್ಟು ತಲೆಗೆ ತೆಗೆದುಕೊಂಡೇ ಇಲ್ಲ. ಪ್ರತಿ ಕ್ಷಣವು ಪ್ರತಿಯೊಂದು ನಿಮಿಷವನ್ನು ಅನುಭವಿಸುತ್ತಿದ್ದಾನೆ. ಒಂದು ಸಣ್ಣ ಹೊಂಡವನ್ನು ತಪ್ಪಿಸಿದಾಗ ಸಂಭ್ರಮ ಪಡುತ್ತಾನೆ, ಪಯಣದ ಆರಂಭದಿಂದ ಕೊನೆಯವರೆಗೂ ಆತನ ಮುಖದಲ್ಲಿ ನಗು ಮಾಯವಾಗಿಲ್ಲ. ಪ್ರತೀ ಕ್ಷಣವು ಬದುಕುತಿದ್ದಾನೆ. ಯಾವುದಕ್ಕೂ ಬೇಸರಿಸುತ್ತಿಲ್ಲ. ಆತನ ದೇಹದೊಳಗೆ ಉತ್ಸಾಹ ಕಡಿಮೆ ಆಗುತ್ತಿಲ್ಲ. ಇಷ್ಟೊಂದು ಒತ್ತಡದ ನಡುವೆ ಆತನೊಳಗಿರುವ ಉತ್ಸಾಹವ ಕಂಡು ನನಗೆ ಹೊಟ್ಟೆ ಕಿಚ್ಚು ಆಗುತ್ತಿದೆ. ಎಲ್ಲವೂ ಇದ್ದ ನಾನು ಆಗಾಗ ಮಂಕಾಗುತ್ತೇನೆ, ಆದರೆ ಆತ ಬದುಕಿನ ಪ್ರತಿ ಕ್ಷಣದಲೂ ಬದುಕಿದ್ದಾನಲ್ಲ ಅದಕ್ಕೆ ಹೊಟ್ಟೆಯುರಿಯಾಗುತ್ತಿದೆ ನಿಮಗಾಗುತ್ತಿಲ್ಲವೇ?
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ