ಸ್ಟೇಟಸ್ ಕತೆಗಳು (ಭಾಗ ೧೨೬೩) - ಹೋಳಿ

ಬಣ್ಣಗಳಿವತ್ತು ನಗುತ್ತಿವೆ. ಅವುಗಳನ್ನ ಹಂಚಿಕೊಂಡದ್ದಕ್ಕೆ, ಒಬ್ಬರಿಗೊಬ್ಬರು ಬಣ್ಣಗಳನ್ನ ಹಂಚಿ ನಗುವ ಉಡುಗೊರೆಯಾಗಿ ನೀಡಿದ್ದಕ್ಕೆ, ಮೊದಲಿನಿಂದಲೂ ಆಸೆ ಇತ್ತು ತಾನು ಎಲ್ಲರ ಜೀವನದಲ್ಲಿ ಅದ್ಭುತಗಳನ್ನ ಸೃಷ್ಟಿಸಬೇಕು, ಸಂಭ್ರಮವನ್ನು ಹೆಚ್ಚಿಸಬೇಕು ಅಂತ. ಆದರೆ ಕಾಲ ಕಳೆದಂತೆ ಬಣ್ಣಗಳ ನಡುವೆ ಜಾತಿ ಧರ್ಮ ವರ್ಗಗಳು ಸಮ್ಮೇಳಿತಗೊಂಡು ಬಣ್ಣಗಳ ಸ್ವಾತಂತ್ರ್ಯವನ್ನೇ ಕಿತ್ತುಕೊಂಡಿದ್ದವು. ಕ್ರೌರ್ಯ, ಮೋಸ, ಅಸೂಯೆಗಳ ನಡುವೆ ಬಣ್ಣಗಳು ಮಂಕಾಗಿದ್ದವು. ದ್ವೇಷ ಅಸೂಯಗಳೇ ಬಣ್ಣಗಳ ಉಸಿರು ಕಟ್ಟಿಸುತ್ತಿದ್ದವು. ಹಾಗಾಗಿ ವರ್ಷದಲ್ಲಿ ಈ ದಿನ ಒಂದು ಅದೆಲ್ಲವನ್ನ ಬದಿಗಿರಿಸಿ ಬಣ್ಣಗಳು ಬಣ್ಣಗಳಾಗಿ ಬದುಕುವುದಕ್ಕೆ ಅವಕಾಶ ಸಿಕ್ಕಿದೆ. ಹಾಗಾಗಿ ಬಣ್ಣಗಳು ಈ ದಿನದ ಆಚರಣೆಗೆ ತಲೆಬಾಗಿ ವಂದಿಸುತ್ತಿವೆ ಮತ್ತು ನೆಮ್ಮದಿಯಲ್ಲಿ ಉಸಿರಾಡುತ್ತಿವೆ. ಆದರೂ ಭಯ ಕಾಡುತ್ತಿದೆ ಮತ್ತೆ ನಾಳೆಯಿಂದ ಬಣ್ಣಗಳೊಳಗೆ ಭಾವಗಳನ್ನು ತುಂಬಿ ಬದುಕಬೇಕಲ್ಲ ಸ್ವಾತಂತ್ರ್ಯವಿಲ್ಲದೆ ಉಸಿರಾಡಬೇಕಲ್ಲಾ ಎಂದು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ