ಸ್ಟೇಟಸ್ ಕತೆಗಳು (ಭಾಗ ೧೨೬೫) - ರೊಟ್ಟಿ

ಬದುಕಿನ ದಾರಿಯ ಕಂಡುಕೊಂಡಿದ್ದಾರೆ. ಬೆಳಗಿನಿಂದ ಸಂಜೆಯವರೆಗೆ ಅವಿರತವಾಗಿ ಬೆವರು ಹರಿಸಿ ದುಡಿದರೂ ಕೂಡ ಮನೆಯಲ್ಲಿ ಬದಲಾವಣೆ ಆಗುವುದಿಲ್ಲ. ಬದುಕಿನ ಹೊಸ ದಾರಿಯ ಬಗ್ಗೆ ಆಲೋಚನೆ ಮಾಡಬೇಕಾಗಿದೆ. ಇರೋದು ಗಂಡ ಹೆಂಡತಿ ಇಬ್ಬರೇ ಆದರೂ ಕನಸುಗಳು ದೊಡ್ಡದಿದೆ. ದೇಹದಲ್ಲಿ ಇಡೀ ಬೆಟ್ಟವನ್ನೇ ಅಗೆದು ಹಾಕುವ ಸಾಮರ್ಥ್ಯವಿದೆ ಅಂದುಕೊಂಡ್ರು ಕೂಡ ದೇಹ ಮಾತನ್ನು ಒಪ್ಪಿಕೊಳ್ಳುವುದಕ್ಕೆ ತಯಾರಿಲ್ಲ. ನಿರ್ಧಾರ ಗಟ್ಟಿಯಾಗಿತ್ತು. ಮನೆಯಲ್ಲಿ ಪ್ರತಿದಿನ ರಾತ್ರಿಗೆ ರೊಟ್ಟಿ ಬಡಿವ ಅಭ್ಯಾಸ ಇದೆ ಅದನ್ನೇ ಸ್ವಲ್ಪ ಹೆಚ್ಚಿಗೆ ಬಡಿದು ಒಂದಷ್ಟು ಜನರಿಗೆ ಹಂಚುವ ತೀರ್ಮಾನ ಮಾಡಿದರು. ಮನೆಯಲ್ಲಿರುವ ಮಡದಿ ಸಂಜೆಯಾದ ಕೂಡಲೇ ಗಂಡನಿಗೆ ಮಾರಾಟಕ್ಕೆ ರೊಟ್ಟಿ ಬಡಿದು ಚಟ್ನಿ ಕಟ್ಟಿ ಸೂರ್ಯ ಮನೆಗೆ ತೆರಳುವಾಗ ಮನೆ ಯಜಮಾನ ಮನೆ ಬಿಟ್ಟು ನಾಲ್ಕು ರಸ್ತೆ ಸೇರುವಲ್ಲಿ ಕುಳಿತು ಕಾಯುತ್ತಾರೆ. ಪುಟ್ಟ ಬುಟ್ಟಿಯನ್ನು ಹಿಡಿದುಕೊಂಡು ಬಂದು ರೊಟ್ಟಿ ಮಾರಾಟ ಮಾಡುತ್ತಾರೆ. ಹಸಿದಿರೋ ಹಲವು ಮನಸ್ಸುಗಳಿಗೆ ಮನೆಯಲ್ಲಿ ರೊಟ್ಟಿ ಬಡಿಯೋದಕ್ಕಾಗದೆ ಇರುವ ಎಲ್ಲಾ ಕಾಲುಗಳು ಇತ್ತ ಹೆಜ್ಜೆ ಇಡುತ್ತವೆ. ಖುಷಿಪಡುತ್ತವೆ. ಆ ಯೋಚನೆಯಿಂದ ಅವರ ಮನೆಯಲ್ಲಿ ಬದುಕು ಬದಲಾಗಿದೆ. ಹಲವು ನಾಲಿಗೆಗಳಿಗೆ ತೃಪ್ತಿ ಸಿಕ್ಕಿದೆ. ಒಂದು ಆಲೋಚನೆಯಿಂದ ಇನ್ನೊಬ್ಬರ ಹೊಟ್ಟೆ ತುಂಬಿಸುತ್ತಾ ಇವರ ಹೊಟ್ಟೆಯೂ ತುಂಬುತ್ತಿದೆ ಜೊತೆಗೆ ಅಂಗಿಯ ಕಿಸೆಯೂ ಕೂಡ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ