ಸ್ಟೇಟಸ್ ಕತೆಗಳು (ಭಾಗ ೧೨೬೬) - ಮೋಸಗಾರರು

ಸ್ಟೇಟಸ್ ಕತೆಗಳು (ಭಾಗ ೧೨೬೬) - ಮೋಸಗಾರರು

ನಂಬಿಕೆ ಕಳೆದುಕೊಂಡಿದ್ದಾನೆ. ಹಸಿದವರಿಗೆ ರೊಟ್ಟಿ ನೀಡಿ ದುಡ್ಡು ನಾಳೆ ನೀಡುವುದಾದರೂ ತೊಂದರೆ ಇಲ್ಲ ಅನ್ನುತ್ತಿದ್ದವ ಆದರೆ ಆ ದಿನದಿಂದ ಆತ ಯಾರಿಗೂ ಉಚಿತವಾಗಿ ನೀಡುವುದನ್ನ ನಿಲ್ಲಿಸಿ ಬಿಟ್ಟಿದ್ದಾನೆ. ಯಾಕೆ ಅಂತ ಅರ್ಥವಾಗಲಿಲ್ಲ ಅವನ ಬಳಿ ಕುಳಿತು ಮಾತನಾಡಿದಾಗ, ಹಸಿದವರನ್ನು ಕಂಡಾಗ ನೋವಾಗುವುದು ಸಹಜ ಹಾಗೆ ಇತ್ತೀಚಿಗೆ ಅದ್ಯಾರೋ ಎಂಟು ಜನ ನಾನು ಕುಳಿತಲ್ಲಿಗೆ ಬಂದು ಹತ್ತತ್ತು ರೊಟ್ಟಿ ಕಟ್ಟಿಸ್ಕೊಂಡು ಹೋದರು ನಾಳೆ ಕೊಡ್ತೀನಿ ಅಂತ ಅಂದ್ರು ಸಾಕು ನಾಳೆ ಹೇಗೋ ದುಡ್ಡು ಸಿಗುತ್ತಲ್ಲ ಅಂತ ಯೋಚಿಸಿ ಗಂಟು ಕಟ್ಟಿಕೊಟ್ಟು ಬಿಟ್ಟೆ. ಆದರೆ ಇವತ್ತಿನವರೆಗೂ ಅವರು ವಾಪಸ್ ಬಂದಿಲ್ಲ ಅವರು ಕೊಟ್ಟ ಹಣದಿಂದ ನನ್ನ ಮರುದಿನದ ರೊಟ್ಟಿಗೆ ಬೇಕಾದ ಪದಾರ್ಥಗಳನ್ನ ಖರೀದಿಸಬಹುದಿತ್ತು, ಆದರೆ ಆ ದುಡ್ಡು ಬರದೇ ಇರೋ ಕಾರಣ ಎರಡು ದಿನ ಯಾರ್ಯಾರದೋ ಮನೆಗೆ ಕೂಲಿ ಕೆಲಸಕ್ಕೆ ಹೋಗಿ ದುಡ್ಡು ಸಂಪಾದನೆ ಮಾಡಿ ಮತ್ತೆ ಆ ದುಡ್ಡಿನಿಂದ ರೊಟ್ಟಿ ಬಡಿಯುವುದಕ್ಕೆ ಪ್ರಾರಂಭ ಮಾಡಿದೆ. ಅವತ್ತು ನಂಬಿಕೆ ಕಳೆದುಕೊಂಡವ ಇಂದು ಕೂಡ ದುಡ್ಡು ನೀಡದೆ ರೊಟ್ಟಿ ನೀಡುವ ಕೆಲಸಕ್ಕೆ ಕೈ ಹಾಕುತ್ತಿಲ್ಲ. ನಾನೇನು ಮನೆ ಅಂತಸ್ತುಗಳನ್ನ ಕಟ್ಟಿಕೊಳ್ಳುವ ಆಸೆ ಇದ್ದವನಲ್ಲ ಆ ದಿನವನ್ನು ಸಾಗಿಸಬೇಕು ಪುಟ್ಟ ಪುಟ್ಟ ಕನಸುಗಳಿಗೆ ಶಕ್ತಿ ಸಿಗಬೇಕಲ್ವಾ ನಿಮ್ಮ ಹೊಟ್ಟೆ ತುಂಬಿಸಿಕೊಳ್ಳುವುದಕ್ಕೆ ಇನ್ನೊಬ್ಬರ ಹೊಟ್ಟೆಗೆ ತುಳಿಯಬೇಡಿ ಹೀಗೆಂದವರು ನೋವಿನಿಂದ ಕಣ್ಣೀರಿಡುತ್ತಾ ರೊಟ್ಟಿ ತಟ್ಟುತ್ತಿದ್ದರು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ