ಸ್ಟೇಟಸ್ ಕತೆಗಳು (ಭಾಗ ೧೨೬) - ಉರುಳಿದ ಮರ

ಸ್ಟೇಟಸ್ ಕತೆಗಳು (ಭಾಗ ೧೨೬) - ಉರುಳಿದ ಮರ

ಇದ್ದ ಬಲವನ್ನೆಲ್ಲಾ ಪ್ರಯೋಗಿಸಿ ಬೇರನ್ನರಳಿಸಲು ಶಕ್ತಿ ತುಂಬಿದರು, ನನ್ನಿಂದ ಸಾಧ್ಯವಾಗುತ್ತಿಲ್ಲ. ನನ್ನೊಳಗಿನ ಜೀವರಾಶಿಗಳಿಗೆ ಕ್ಷಮೆಯಾಚಿಸುತ್ತಾ ಉರುಳುತ್ತಿದ್ದೇನೆ ಎನ್ನುತ್ತಾ ಆ ಮರ ಧರೆಗುರುಳಿತು ‌ಮರದ ಯಾತನೆ ಭೂಮಿಗರಿವಾದ್ದರಿಂದ ತನ್ನ ಕಂಪನವನ್ನು ತಡೆದು ಮಡಿಲನ್ನ ನೀಡಿತು. ಉಸಿರಿನ ನೂಲನ್ನು ಕತ್ತರಿಸಿಕೊಂಡರು, ಮರದ ಯಾತನೆಯು ಕಣ್ಣೀರು ದೂಳಿನ ಕಣಗಳ ಸಮ್ಮಿಳಿತವಾಗಿ ಜಿನುಗುತ್ತಿದೆ. 

ಆಗಷ್ಟೇ ಮರಿಗೆ ಜೀವಕೊಟ್ಟ ಆಹಾರ ಹುಡುಕಲು ಹೋದಾ ಗುಬ್ಬಿ ಬಂದಾಗ ನಾನು ಏನೆಂದು ಉತ್ತರಿಸಲಿ, ದಿಕ್ಕುತಪ್ಪಿದ ಅಳಿಲು, ಮಕರಂದ ಹೀರುವ ಜೇನು, ಜೀರುಂಡೆ, ಓಡಾಡುತ್ತಲೇ ಇರುವ ಮಂಗ, ಒಂದಷ್ಟು ಸೂಕ್ಷ್ಮಜೀವಿಗಳ ಸಾವಿಗೆ ನಾವೇ ಕಾರಣವಾಗುತ್ತಿದ್ದೇವೆ. ಯೋಚನೆಯೊಂದು ನಾವು ಅಭಿವೃದ್ಧಿಯ ನಿಟ್ಟಿನಲ್ಲಿ ಕಾಂಕ್ರಿಟೀಕರಣಗಳನ್ನು ಗೊಳಿಸಿ ಬೇರಿಗೆ ನೀರಿಗೆ ಜಾಗ ಸಿಗದಂತೆ ಮಾಡಿ ಹಾಕಿದ್ದೇವೆ ಉಸಿರಾಡಲು  ಕಷ್ಟ ಪಡುತ್ತಾ ಮರ ನನ್ನಲ್ಲಿ ಹೇಳಿದಂತೆ  " ಬದುಕುವ ಅವಕಾಶ ನೀಡಿ ಸ್ವಾಮಿ " ನಾನಿನ್ನ ಉಸಿರಿಗೆ ಒಡೆಯನಲ್ಲವೆ . ಗಿಡ ನೆಟ್ಟು  ಬೆಳೆಸುವ ಭರವಸೆಯನ್ನು ನೀಡುವವರು ಬೇಕಾಗಿದೆ. ಹಾಗಾದಾಗ ಮರದಾತ್ಮಕ್ಕೆ ಶಾಂತಿ ಸಿಗಬಹುದು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ