ಸ್ಟೇಟಸ್ ಕತೆಗಳು (ಭಾಗ ೧೨೭೦) - ಅಪರಿಚಿತನಾದ

ಅವನಿಗೆ ತಿಂಗಳ ಸಂಬಳ ನೀಡಲಾಗುತ್ತದೆ. ಅದೊಂದು ಪುಟ್ಟ ಕೋಣೆ ಕಿಟಕಿ ಬಾಗಿಲುಗಳು ಏನು ಇಲ್ಲ ಕೇಳುವುದಕ್ಕೆ ನೋಡುವುದಕ್ಕೆ ವ್ಯವಸ್ಥೆಯು ಇಲ್ಲ. ಅದರೊಳಗೆ ಬದುಕಬೇಕು ಅಂತ ತಿಳಿಸಲಾಗಿದೆ. ಒಂದು ವರ್ಷ ದಾಟಿದ ನಂತರ ಆ ಪುಟ್ಟ ಕೋಣೆಗೆ ಒಂದೆರಡು ಕಿಟಕಿಗಳನ್ನ ತೆರೆದಿಟ್ಟು ಮತ್ತೆ ಸಂಬಳವನ್ನು ಏರಿಸಿದರು. ಹೊರಗಿನ ಜಗತ್ತನ್ನ ಅನುಭವಿಸುವ ಹಾಗಿಲ್ಲ. ವರ್ಷಗಳು ದಾಟಿದ ಹಾಗೆ ಗೋಡೆಯಲ್ಲಿ ಒಂದಷ್ಟು ಚಿತ್ತಾರಗಳು ಕೊಣೆಗೊಂದು ಟಿವಿ, ಮೇಲೆ ತಿರುಗುವ ಫ್ಯಾನು ಊಟ ತಿಂಡಿಯ ವ್ಯವಸ್ಥೆಯು ಅಲ್ಲಿಗೆ ಆಯಿತು. ಹೆಚ್ಚಿನ ಸಂಬಳಕ್ಕಾಗಿ ಆತ ಅದೇ ಜಾಗಕ್ಕೆ ಒಗ್ಗಿಕೊಂಡು ಬಿಟ್ಟ. ವರ್ಷಗಳು ದಾಟುತ್ತ ಹೋಯಿತು ಸಂಬಳ ಏರಿಕೆಯಾಯಿತು. ಆತನ ಬದುಕಿಗೆ ಆ ಕೋಣೆಯಲ್ಲಿ ಇನ್ನೊಂದಷ್ಟು ಹೆಚ್ಚು ದಿನ ಇರುವುದಕ್ಕೆ ಸಾಧ್ಯವಾಗಬಹುದಾದ ವ್ಯವಸ್ಥೆಗಳು ಸಿಕ್ಕವು. ವರ್ಷ ದಾಟಿ ದೇಹ ಬಾಗಿ ಕೆಲಸ ಸಾಧ್ಯವಿಲ್ಲ ಅಂತಾದಾಗ ಆತ ಆ ಕೋಣೆಯಿಂದ ಹೊರಗೆ ಬರಬೇಕಾಯಿತು. ದಾರಿಯಲ್ಲಿ ಕಂಡ ಬದುಕಿನ ಅದ್ಭುತ ದೃಶ್ಯಗಳನ್ನ ಆತ ಇಷ್ಟರವರೆಗೆ ಕಂಡೇ ಇರಲಿಲ್ಲ ಆತನ ಮನೆಯವರಿಗೆ ಆತನ ಪರಿಚಯ ಸಿಗಲಿಲ್ಲ, ಆಟ ಆಡೋದು ತಿಳಿದಿಲ್ಲ ಸಂಘಟನೆಯ ಬಗ್ಗೆ ಗೊತ್ತಿಲ್ಲ ಪ್ರೀತಿ ಸ್ನೇಹ ಮರೆತು ಹೋಗಿದೆ ಗೆಳೆಯರ ಬಳಗ ದೂರವಾಗಿದೆ ಒಟ್ಟಿನಲ್ಲಿ ಆತ ಜಗತ್ತಿಗೆ ಅಪರಿಚಿತನಾಗಿದ್ದ. ಆತನಿಗೆ ಬದುಕುವುದಕ್ಕೆ ಭಯವಾಯಿತು. ತನ್ನ ನಿರ್ಧಾರದ ಬಗ್ಗೆ ವ್ಯಥೆಯಾಯಿತು. ಇಷ್ಟು ದಿನ ಬದುಕಿನ ಪುಟ್ಟ ಪುಟ್ಟ ಖುಷಿಗಳನ್ನ ಮರೆತು ದುಡ್ಡಿಗಾಗಿ ಆ ಕೋಣೆಯ ಒಳಗೆ ಕಳೆದ ದಿನಗಳನ್ನು ನೆನೆದು ನೋವಾಯಿತು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ