ಸ್ಟೇಟಸ್ ಕತೆಗಳು (ಭಾಗ ೧೨೭೩) - ಆಕೆ

ಸ್ಟೇಟಸ್ ಕತೆಗಳು (ಭಾಗ ೧೨೭೩) - ಆಕೆ

ಅವನ ದಿನಚರಿಯ ಪುಸ್ತಕಗಳು ಪ್ರತಿದಿನವೂ ಒಂದಷ್ಟು ಯೋಚನೆಗಳಿಂದ ಬೇಸರದಿಂದ ಚಿಂತೆಗಳಿಂದಲೇ ಆ ದಿನವನ್ನು ಪೂರ್ತಿಗೊಳಿಸ್ತಾ ಇದ್ದವು. ಪ್ರತಿದಿನ ಬರೆಯೋ ಅಭ್ಯಾಸ ಅದು ಮುಂದುವರೆದಿತ್ತು. ಏನೂ ಬದಲಾವಣೆ ಇರಲಿಲ್ಲ ಹೊಸ ಆಲೋಚನೆ ಮಾಡಿದರು ಅದು ಮುಂದಡಿಯಿಡುತ್ತಿರಲಿಲ್ಲ. ಅದೆಲ್ಲಿಂದ ಪರಿಚಯವಾಯಿತೋ ಗೊತ್ತಿಲ್ಲ. ಆಕೆ ಅವನ ಜೀವನಕ್ಕೆ ಬಂದಳು. ಯಾಕೆ ಏನು ಇದ್ಯಾವುದರ ಅರಿವೆ ಇಲ್ಲ. ಭಗವಂತನೇ ಕಳುಹಿಸಿಕೊಟ್ಟಿರಬೇಕು. ಅಂದಿನಿಂದ ಆತನ ಜೀವನೋತ್ಸಾಹ ಹೆಚ್ಚಾಯ್ತು ,ಹೊಸತೇನೋ ಮಾಡಬೇಕೆನ್ನುವ ಹಂಬಲ ಹೆಚ್ಚಾಯಿತು, ಎಲ್ಲಕ್ಕಿಂತ ಹೆಚ್ಚಾಗಿ ಜೀವನದಲ್ಲಿ ಶಿಸ್ತು ಜೊತೆಯಾಯಿತು. ಆತ ಬದಲಾದ. ಮಾತುಕತೆ ನಡೆ-ನುಡಿ ಕೆಲಸ ಎಲ್ಲದರಲ್ಲೂ ಗೆಲುವು ಹತ್ತಿರ ಸುಳಿಯಿತು. ಸೋಲು ಬರಲೇ ಇಲ್ಲ ಅಂತಲ್ಲ ಆದರೆ ಆ ಸೋಲಿನ ಜೊತೆಗೆ ಬದುಕೋದು ಹೇಗೆ ಅನ್ನೋದು ತಿಳಿಯಿತು. ಆತ ಆಕೆಗೆ ಚಿರಋಣಿಯಾಗಿರುತ್ತಾನೆ. ಜೀವನದ ಕೊನೆಯವರೆಗೂ ಆತನ ಜೀವನವನ್ನು ಬದಲಿಸಿದ್ದಕ್ಕೆ ರೂಪಿಸಿದ್ದಕ್ಕೆ ಬದುಕಿಗೆ ಅವನನ್ನ ಪರಿಚಯಿಸಿದ್ದಕ್ಕೆ. ಆತ ಅದ್ಭುತವಾಗುವುದರ ಕಡೆಗೆ ಸಾಗಿದ್ದಾನೆ. ಅವಳಿಗೆ ಹೆಚ್ಚೇನು ಆಸೆ ಇಲ್ಲ. ಈತ ಏನು ಸಾಧಿಸ್ತಾನೆ ಅನ್ನುವ ಯೋಚನೆ ಮಾತ್ರ. ಪ್ರತಿದಿನ ಅವನನ್ನು ರೂಪಿಸುತ್ತಿದ್ದಾಳೆ ಜೊತೆಗೆ ತಾನು ರೂಪಗೊಳ್ಳುತ್ತಿದ್ದಾಳೆ. ಇಬ್ಬರೂ ಜೊತೆಗೆ ನಡೆಯುತ್ತಿದ್ದಾರೆ ಸಾಧನೆಯಾಗಬೇಕು ಅನ್ನುವ ಮನಸ್ಸಿನಿಂದ.ಆ ದಿನದಿಂದ ಆತನ ದಿನಚರಿ ಬಣ್ಣಗಳಿಂದ ಪ್ರತಿದಿನವನ್ನ ಪೂರ್ತಿಗೊಳಿಸ್ತಾ ಇದೆ . ಆತ ನಕ್ಕು ದೂರದಲ್ಲಿ ಕುಳಿತು ತನ್ನನ್ನೇ ನೋಡುತ್ತಿದ್ದ ಅವಳನ್ನ ಎವೆಯಿಕ್ಕದೆ ನೋಡುವುದಕ್ಕೆ ಆರಂಭ ಮಾಡಿದ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ