ಸ್ಟೇಟಸ್ ಕತೆಗಳು (ಭಾಗ ೧೨೭೪) - ಕಾಯುವಿಕೆ

ಕಾಯುವಿಕೆ ಯಾವ ಕಾರಣಕ್ಕೆ ಗೊತ್ತಿಲ್ಲ. ಸೂರ್ಯ ದಿಗಂತದಂಚಲಿ ಜಾರಿ ಕಣ್ಮರೆಯಾಗುವ ಗಳಿಗೆ. ಹಕ್ಕಿಗಳು ತಮ್ಮ ಬಣ್ಣ ಕಳೆದುಕೊಂಡು ಕಪ್ಪು ಬಣ್ಣಕ್ಕೆ ತಿರುಗಿದ್ದಾವೆ, ಸೂರ್ಯನು ಬಣ್ಣ ಬಣ್ಣ ಚಿತ್ತಾರದಿಂದ ಕಂಗೊಳಿಸುತ್ತಿದ್ದಾನೆ. ತನ್ನ ಬಣ್ಣಗಳನ್ನು ಆಕಾಶಕ್ಕೆ ಸಾಲ ನೀಡಿದ್ದಾನೆ. ಗಿಡ ಮರಗಳೆಲ್ಲಾ ಹಸಿರು ಬಣ್ಣ ಕಳೆದುಕೊಂಡು ಕಪ್ಪು ಬಣ್ಣಕ್ಕೆ ತಿರುಗುತ್ತಿವೆ. ರಸ್ತೆಗಳು ಬೆಳಕಿಲ್ಲದೆ ತಮ್ಮ ನೈಜ ಸೌಂದರ್ಯವನ್ನ ತೋರಿಸೋದಕ್ಕಾಗದೆ ವ್ಯಥೆ ಪಡುತ್ತಿವೆ. ಎಲ್ಲರ ಮುಖದಲ್ಲಿ ಮನೆಯ ಕಡೆಗೆ ತೆರಳುವ ದಾವಂತ ಕಾಣುತ್ತಿದೆ. ಆ ರಸ್ತೆ ತಿರುವಿನಲ್ಲಿ ಬಲಕ್ಕೆ ತಿರುಗುವ ಪುಟ್ಟ ರಸ್ತೆಯ ಬದಿಯಲ್ಲಿ ಆ ಹುಡುಗ ಕಾಯುತ್ತಿದ್ದಾನೆ. ಆತನ ಕಣ್ಣುಗಳಲ್ಲಿ ನಿರೀಕ್ಷೆ ತುಂಬಿ ತುಳುಕುತ್ತಿದೆ. ಯಾವುದೋ ಆತನಿಗೆ ತುಂಬಾ ಅಗತ್ಯವಾಗಿರೋದು ಆತನಿಗೆ ಸಿಗಲಿದೆ. ಕೈಗಳನ್ನು ಒಂದರ ಮೇಲೆ ಒಂದರಂತೆ ಹಿಸುಕಿಕೊಳ್ಳುತ್ತಾ ಕಣ್ಣಾಲಿಗಳನ್ನು ಅತ್ತಿಂದಿತ್ತ ಓಡಿಸುತ್ತಾ ಕಾಯುತ್ತಲೇ ಇದ್ದಾನೆ. ನಿಂತಲ್ಲಿ ನಿಲ್ಲಲಾಗುತ್ತಿಲ್ಲ ಚಡಪಡಿಕೆ ಹೆಚ್ಚಾಗಿದೆ. ಒಟ್ಟಿನಲ್ಲಿ ತುಂಬಾ ಇಷ್ಟಪಟ್ಟಿರೋದು ಕಣ್ಣ ಮುಂದೆ ಕಾಣುವ ಕ್ಷಣಕ್ಕಾಗಿ ಕಾಯುತ್ತಿದ್ದಾನೆ. ಆತ ಆತ ಕಾಯುತ್ತಿರುವುದು ಆತನಿಗೆ ದೊರಕ್ಕಿಲ್ಲವಾದರೆ ಆತ ತುಂಬಾ ಜರ್ಜರಿತನಾಗುತ್ತಾನೆ. ಆತ ಕಾಯುತ್ತಲಿದ್ದಾನೆ ಸಮಯ ಆತನಿಗೆ ಅಗತ್ಯವಾದುದನ ನೀಡುವುದಕ್ಕೆ ಕಾಯುತ್ತಲಿದೆ... ಕಾಯುವಿಕೆ ನಿರಂತರವಾಗಿ ಸಾಗಿದೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ