ಸ್ಟೇಟಸ್ ಕತೆಗಳು (ಭಾಗ ೧೨೭೫) - ಆಸೆ

ಸ್ಟೇಟಸ್ ಕತೆಗಳು (ಭಾಗ ೧೨೭೫) - ಆಸೆ

ಅವನ ಒಳಗೆ ಯಾರಿಗೂ ಹೇಳಿಕೊಳ್ಳದ ಪುಟ್ಟದೊಂದು ಆಸೆ ಇದೆ. ಅದನ್ನ ಅವತ್ತು ನನ್ನಲ್ಲಿ ಹೇಳಿಕೊಂಡಿದ್ದ. ನನ್ನ ಆಸೆ ಏನೆಂದರೆ ನಾನು ಕಳೆದು ಹೋಗಬೇಕು. ಯಾರಿಗೂ ಎಷ್ಟು ಹುಡುಕಿದರೂ ಸಿಗುವಂತಾಗಬಾರದು. ಒಂದಷ್ಟು ಸಮಯ ನನ್ನನ್ನ ಈ ಲೋಕ ಮರೆತುಬಿಡಬೇಕು. ನಾನೇನು ಎಲ್ಲಿದ್ದೇನೆ ಹೇಗಿದ್ದೇನೆ ಇದ್ಯಾವುದರ ಪರಿವೆಯು ಅವರಿಗೆ ಇರಬಾರದು. ಲೋಕ ಹಾಗೆ ನಡೆಯಬೇಕು. ಎಲ್ಲವನ್ನು ಮುಗಿಸಿ ಮುಂದೊಂದು ದಿನ ನಾನು ಮರಳಿ ಬಂದಾಗ ಹಿಂದಿಗಿಂತ ಇನ್ನೊಂದಷ್ಟು ಎತ್ತರ ಬಲಾಢ್ಯನಾಗಿರಬೇಕು. ಸಮಾಜ ನನ್ನ ಒಪ್ಪುವಂತಿರಬೇಕು. ಮಾತಿಗೊಂದಿಷ್ಟು ತೂಕ ಸಿಗಬೇಕು. ನಾನು ಕಳೆದು ಹೋದ ಕಥೆಯನ್ನ ಪ್ರತಿಯೊಬ್ಬರಲ್ಲಿ ಹೇಳ್ತಾ ಹೋದಾಗ ಎಲ್ಲರೂ ಕುಳಿತು ಕೇಳುವಂತಾಗಬೇಕು. ಅದರಿಂದ ಅವರ ಜೀವನಕೊಂದು ಪಾಠ ಸಿಗಬೇಕು. ಕಳೆದುಹೋಗುವ ಅದ್ಭುತ ಕ್ಷಣದ ಮೌಲ್ಯ ಪ್ರತಿಯೊಬ್ಬರಿಗೂ ಅರ್ಥವಾಗಬೇಕು. ಹಾಗೆ ಆಗಾಗ ಕಳೆದು ಹೋಗ್ತಾ ಕಳೆದು ಹೋಗ್ತಾ ಹೊಸ ವ್ಯಕ್ತಿಯಾಗಿ ಮರಳಿ ಬರುವ ದಿನ ಬರಬೇಕು . ಹಾಗಾಗಿ ನನಗೆ ಆಸೆ ಆದಷ್ಟು ಬೇಗ ಕಳೆದು ಹೋಗಬೇಕು. ನಿಮಗ್ಯಾರಿಗೂ ಸಿಗದಂತಹ ಜಾಗಕ್ಕೆ ಹೋಗಿ ಮತ್ತೆ ತಿರುಗಿ ಬರುವಂತಾಗಬೇಕು. ಈ ಆಸೆಗಳನ್ನು ಹಲವು ಬಾರಿ ನನ್ನಲ್ಲಿ ಹೇಳಿಕೊಂಡಿದ್ದಾನೆ. ಆದರೆ ನಾನು ಅದನ್ನು ಕೇಳಿ ನಕ್ಕು ಅವನನ್ನ ಮುಂದಿನ ಕೆಲಸಕ್ಕೆ ಅಣಿ ಮಾಡಿದ್ದೇನೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ