ಸ್ಟೇಟಸ್ ಕತೆಗಳು (ಭಾಗ ೧೨೭) - ಬಣ್ಣ
ಅಲ್ಲಿ ಬಣ್ಣಗಳು ಮಾತನಾಡುತ್ತವೆ. ಅಲ್ಲಿಗೆ ಬಂದವರು ಮೌನದ ಕಾಲ್ನಡಿಗೆ ನಡೆಸುತ್ತಾರೆ. ನಮ್ಮೊಳಗಿನ ಯೋಚನೆಗೊಂದು ಕೆಲಸ ಕೊಡಿಸಬೇಕಾದರೆ ಇದರೊಳಗೆ ಕಾಲಿಡಲೇಬೇಕು. ಆ ಮೂಲೆಯಲ್ಲಿ ನೆರಳಿನ ನಡುವೆ ಕುಳಿತಿದ್ದಾನೆ ಅವನು. ಆತನ ಕಣ್ಣೊಳಗೆ ಬಣ್ಣಗಳು ಪ್ರತಿಫಲಿಸಿ ಹೊಮ್ಮುತ್ತಿವೆ. ತುಟಿಯಂಚಿನ ನಗು ಮುಂದಿನ ಆಲೋಚನೆಗೆ ಇಂಬು ನೀಡುತ್ತಿದೆ. ನೆರಳಿಗೂ ಒಂದು ಸೌಂದರ್ಯ ಇದೆ ಅನ್ನೋದಕ್ಕೆ ಮೂಲೆಯಲ್ಲಿ ಬೀಳೋ ಇವನ ನೆರಳಿನ ಚಿತ್ರವೇ ಸಾಕ್ಷಿ . ಪ್ರತಿಕ್ಷಣವನ್ನು ಕುತೂಹಲದಿಂದ ಕಳೆಯುತ್ತಾನೆ. ಕುಂಚದಲ್ಲಿ ಕೌತುಕ ಸೆರೆಹಿಡಿಯುತ್ತಾನೆ. ದುಃಖ ಮರೆಯುತ್ತಾನೆ. ಮೊದಲು ರೇಖೆ ಎಳೆಯಲು ಪರದಾಡಿದ ಅವನ ಕೈಗಳು, ಇಂದು ರೇಖಾ ವಿನ್ಯಾಸಗಳನ್ನು ಕ್ಷಣಮಾತ್ರದಲ್ಲಿ ಮುಂದಿಡುತ್ತವೆ. ಅವನೊಳಗಿನ ಬಣ್ಣಗಳಿಗೆ ಭಾವನೆಯಿದೆ. ಯಾವುದೇ ಪಂಗಡಗಳಿಗೆ ಸೇರಿದ ಸ್ವತಂತ್ರವಾಗಿ ಇಷ್ಟಬಂದ ಕಡೆ ಚಲಿಸುವ ಕಾರಣ ಏನೋ ಬಣ್ಣಗಳು ಅವನೊಂದಿಗೆ ಉಳಿದುಬಿಟ್ಟಿದೆ. ಅವನುಸಿರಿನ ಕೊನೆಯ ಹನಿಯವರೆಗೂ ಬಣ್ಣಗಳು ಉಸಿರಾಡುವುದು ಖಂಡಿತ... ಮುಂದೆ ಬಣ್ಣ ಅನಾಥವಾದಾಗ ನಾವು ಕೈಹಿಡಿದು ನಡೆಸಲು ತಯಾರಾಗಬೇಕು, ಯಾಕೆಂದರೆ ಬಣ್ಣ ಬದುಕಬೇಕಲ್ಲ. ಅದರಿಂದಲೇ ನಮ್ಮ ಬದುಕಲ್ವಾ....
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ