ಸ್ಟೇಟಸ್ ಕತೆಗಳು (ಭಾಗ ೧೨೮೯) - ಬೆಲೆ

ಸ್ಟೇಟಸ್ ಕತೆಗಳು (ಭಾಗ ೧೨೮೯) - ಬೆಲೆ

ಮನೆಯ ಮುಂದಿನ ಕೋಣೆಯಲ್ಲಿ ಉಸಿರು ನಿಂತ ದೇಹ ಮಲಗಿಬಿಟ್ಟಿದೆ. ಇಷ್ಟು ದಿನದವರೆಗೆ ಮನೆ ಚೆನ್ನಾಗಿ ಉಸಿರಾಡುವಂತೆ ಮಾಡುವುದಕ್ಕೆ ಪ್ರಯತ್ನಪಟ್ಟ ಆ ಮನೆಯ ಜೀವ ಪ್ರಾಣ ಕಳೆದುಕೊಂಡು ಬಿಟ್ಟಿದೆ. ಮನೆಯಲ್ಲಿ ಈ ಸಾವನ್ನ ಸಂಭ್ರಮಿಸುವವರು ಸೇರಿಕೊಂಡಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ದೇಹದ ಆರೋಗ್ಯ ಕೆಟ್ಟೋ ಮನೆಯವರಿಗೆ ಅವರನ್ನು ನೋಡಿಕೊಳ್ಳುವುದೇ ಸಮಸ್ಯೆ ಆಗಿತ್ತು, ಅವರ ಸಾವನ್ನ ಎದುರು ನೋಡುತ್ತಿದ್ದವರು ಪೀಡೆ ತೊಲಗಿತು ಅಂದುಕೊಂಡುಬಿಟ್ಟರು. ಹಾಗೆ ಉಸಿರು ನಿಲ್ಲಿಸಿದ ದೇಹವನ್ನು ಚಟ್ಟದ ಮೇಲೆ ಮಲಗಿಸಿ ಬೆಂಕಿ ಹಚ್ಚುವ ಕೆಲಸ ಆರಂಭ ಆಯ್ತು. ಅವರಿಗೆ ಇಷ್ಟವಾಗಿರುವ ಎಲ್ಲ ವಸ್ತುಗಳನ್ನ ಅಲ್ಲೇ ಬೆಂಕಿಗೆ ಅರ್ಪಿಸಲಾಯಿತು. ಅವರ ಎಲ್ಲ ನೆನಪುಗಳನ್ನ ಕಳೆದುಕೊಳ್ಳುವುದಕ್ಕೆ ತೀರ್ಮಾನ ಮಾಡಲಾಯಿತು. ಅವರು ಬಳಸಿದ ಅವರ ಬಟ್ಟೆ ವಸ್ತುಗಳು ಎಲ್ಲವೂ ಕೂಡ ಬೆಂಕಿಯ ಪಾಲಾದವು. ಈ ಮನೆಯನ್ನ ಕಟ್ಟಿ ಪ್ರತಿಯೊಬ್ಬರಿಗೂ ಮಾಡಿಟ್ಟ ಆಸ್ತಿ ಕೈ ತುಂಬಾ ಹಣ ಇದ್ಯಾವುದೂ ಯಾರಿಗೂ ಸೂತಕ ಅನ್ನಿಸಲೇ ಇಲ್ಲ. ಅದು ಪ್ರತಿಯೊಬ್ಬರಿಗೂ ತಮಗೆ ಸೇರಬೇಕು ಅನ್ನುವ ಆಸೆ ಹೆಚ್ಚಾಯ್ತು. ಅದಕ್ಕೆ ಕಿತ್ತಾಟ ಆರಂಭವಾಯಿತು. ದುಡ್ಡಿಗೆ ಬರದ ಸೂತಕ ಬೆಲೆ ಇಲ್ಲದ ವಸ್ತುಗಳಿಗೆ ಬಂದಿರೋದು ವಿಪರ್ಯಾಸ ನೀವೇನಂತೀರಿ?

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ