ಸ್ಟೇಟಸ್ ಕತೆಗಳು (ಭಾಗ ೧೨೮) - ಸಮಯ
ಈ ಮುಳ್ಳು ಸಂತಸವನ್ನು ನೀಡುತ್ತದೆ, ನೋವನ್ನು ನೀಡುತ್ತಿದೆ. ಇಲ್ಲಿ ಬದುಕು ಕ್ಷಣದ ಲೆಕ್ಕದಲ್ಲಿ ಬಿಕರಿಯಾಗುತ್ತದೆ. ನಿಂತರೆ ಕಲ್ಲಾಗುವ ಕಾರಣ ಚಲಿಸುತ್ತಲೇ ಇರಬೇಕಾಗಿದೆ, ಹೀಗೆ ಪಾದ ಸವೆಸಿ ನಿಲ್ದಾಣವೊಂದರಲ್ಲಿ ಸದ್ಯಕ್ಕೆ ನಿಂತಿದ್ದಾನೆ ಭಾರ್ಗವ. ಅವನು ಆರು ಅಂತಸ್ತಿನ ಕಟ್ಟಡವೊಂದರ ಮೇಲೆರುವ ಮೆಟ್ಟಿಲಿನ ಸಂಧಿಯಲ್ಲಿ ಅಂಡು ಊರಲು ಒಂದು ಕುರ್ಚಿ, ನಾಲ್ಕು ಹೆಜ್ಜೆ ಚಲಿಸಲು ಆರು ಅಡಿ ಜಾಗ ಇಲ್ಲಿ ಸ್ಥಾಯಿಯಾಗಿದ್ದಾನೆ. ಭಾರ್ಗವ ಹೆಸರಿಗೆ ತಕ್ಕಂತೆ ಛಲವಂತ. ಗಾರೆ, ಕಬ್ಬಿಣ, ಮಣ್ಣು, ವ್ಯಾಪಾರ, ಎಲ್ಲಕಡೆ ಲಾಭ ಕಾಣದೆ ಕೊನೆಗೆ ಸಮಯವನ್ನು ಮಾರಲು ತಯಾರಾಗಿದ್ದಾನೆ. ಮೇಲಿನದಕ್ಕಿಂತ ಒಂದಷ್ಟು ಹೆಚ್ಚು ಸಮಯ ಇಲ್ಲಿ ನೆಲೆಯಾಗಿದ್ದಾನೆ. ಇಲ್ಲಿ ಸಮಯ ಮಾರಿದ್ದಾನೆ, ನಿಂತ ಸಮಯ ನಡೆಸಿದ್ದಾನೆ. ಇವನು ಸಮಯ ಮಾರುತ್ತಿದ್ದರು ಕಾಲ ನಿಲ್ಲಬೇಕಲ್ಲಾ ಅದು ಚಲಿಸಿದೆ. ಇವನ ಸಣ್ಣ ಅಂಗಡಿಯ ಗಡಿಯಾರದಲ್ಲಿ ಯಾವುದನ್ನಾದರೂ ಕೊಳ್ಳಬೇಕಲ್ಲಾ, ಬರಿಯ ಪ್ರದರ್ಶನಕ್ಕಿಡಲು ಇವನದು ವಸ್ತುಸಂಗ್ರಹಾಲಯ ಅಲ್ಲ. ತನ್ನವರಿಗೆ ಸಮಯ ನೀಡದೆ ಕಾರ್ಯರ್ಥಿಯಾಗಿ ಅತಿಯಾಗಿ ದುಡಿದವನಿಗೆ ಮನೆಯವರ ಜೊತೆ ಕಾಲ ಕಳೆಯೋಣವೆಂದರೆ ಅವರು ಯಾವುದಕ್ಕೂ ಸಿದ್ದರಿಲ್ಲ. ಮುಂಜಾನೆಯಿಂದ ಇಲ್ಲಿ ಸಂಜೆಯವರೆಗೆ ಧೂಳು ಹೊಡೆಯುತ್ತಾನೆ. ತನ್ನದೇ ಕೈಗಡಿಯಾರ ಸರಿ ಮಾಡುತ್ತಾನೆ. ಬರೋ ಗ್ರಾಹಕರಿಗೆ ದಾರಿ ಕಾಯುತ್ತಾನೆ. ಇವನ ಗೋಡೆಯಲ್ಲಿ ನೇತುಹಾಕಿರುವ ಗಡಿಯಾರಗಳನ್ನು ಒಂದೊಂದು ಸಮಯದಲ್ಲಿ ನಿಂತು ಮೂಕಪ್ರೇಕ್ಷಕವಾಗಿವೆ. ಆದರೂ ಇವನ ಬದುಕು ಬದಲಾವಣೆಯಾಗುವ ಸಮಯ ಬರಲೇ ಇಲ್ಲ. ಗೋಡೆ ಗಡಿಯಾರ ನಡೆದು ಮನೆಯ ಜೀವನ ನಿಧಾನವಾಗಿ ಹೆಜ್ಜೆ ಹಾಕಲು ತಿಳಿಸುವುದೋ....ಕಾಲವೇ ಉತ್ತರಿಸಬೇಕು .
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ