ಸ್ಟೇಟಸ್ ಕತೆಗಳು (ಭಾಗ ೧೨೯೦) - ಮಗಳೇ ನೆನಪಿರಲಿ…

ಮಗಳೇ ನನ್ನ ಮಾತನ್ನು ಸರಿಯಾಗಿ ಕೇಳು. ಜಗತ್ತಲ್ಲಿ ಕಣ್ಣು ಮುಚ್ಚಿ ನಂಬುವುದಕ್ಕೆ ಯಾರನ್ನು ಸಾಧ್ಯವಿಲ್ಲ. ನಿನಗೆ ಒಂದಷ್ಟು ಹೊತ್ತು ಸಮಯ ನೀಡುತ್ತಾರೆ, ನಿನ್ನ ಕಷ್ಟ ಸುಖವನ್ನು ವಿಚಾರಿಸುತ್ತಾರೆ, ನಿನ್ನ ದೂರದ ಪಯಣಕ್ಕೆ ಜೊತೆಯಾಗಿರುತ್ತಾರೆ, ನಿನಗೆ ನಾವಿದ್ದೇವೆ ಅನ್ನುವ ಧೈರ್ಯ ತೋರಿಸ್ತಾರೆ, ನಿನ್ನ ನೋವಿಗೆ ಸಾಂತ್ವನ ಹೇಳುತ್ತಾರೆ, ಗೆಲುವಿನಲ್ಲಿ ಜೊತೆ ನಿಲ್ತಾರೆ, ಹೀಗೆ ಯಾರಾದರೂ ಒಬ್ಬರು ಸಿಕ್ಕೇ ಸಿಕ್ತಾರೆ. ಆದರೆ ಹಾಗಿದ್ದರೂ ಕೂಡ ಅವರನ್ನು ಕಣ್ಣು ಮುಚ್ಚಿ ಒಪ್ಪಿಕೊಳ್ಳಬೇಡ. ಜಗತ್ತು ತುಂಬಾ ಬದಲಾಗಿಬಿಟ್ಟಿದೆ. ನಿನ್ನ ಮುಗ್ದತೆಯನ್ನು ಅವರ ಉಪಯೋಗಕ್ಕೆ ಬಳಸಿಕೊಂಡು ಅವರು ಸಭ್ಯಸ್ತರಾಗ್ತಾರೆ. ನಿನ್ನ ಹಾಗೆ ಇನ್ನೊಂದಷ್ಟು ಜನರ ಜೊತೆ ವ್ಯವಹಾರದಿಂದ ಎಲ್ಲೋ ಒಂದು ಕಡೆ ಯಾರೋ ಜೊತೆಗೂ ಬದುಕಿ ಬಿಡ್ತಾರೆ. ನೀನು ಕನಸಿನ ಗೋಪುರಗಳನ್ನು ಕಟ್ಟಿಕೊಂಡು ಆಸೆಯ ಪರ್ವತಗಳ ಮೇಲೆ ಒಂದು ದಿನ ಕಣ್ಣೀರು ಹಾಕುತ್ತಾ ನಿಲ್ಲುವ ದಿನ ಬಂದೇ ಬಿಡುತ್ತದೆ. ಹಾಗಾಗಿ ಮಗಳೇ ನಂಬಿಕೆ ಅನ್ನೋದು ಇದೆಯಲ್ಲ ಅದು ನಮ್ಮ ಹೆತ್ತವರ ಜೊತೆ ಇದ್ದ ಹಾಗೆ ಹತ್ತಿರದವರತ್ರ ಅಷ್ಟು ಸುಲಭವಾಗಿ ಸಾಧ್ಯವಾಗುವಂತದ್ದಲ್ಲ. ಎಲ್ಲರಿಗೂ ಎಲ್ಲವೂ ದಕ್ಕುವುದಿಲ್ಲ ನಿನ್ನ ಪಾಲಿಗೆ ಯಾವುದು ಸಿಗುವುದಿಲ್ಲವೋ ಅದು ಖಂಡಿತ ನಿನ್ನಿಂದ ದೂರ ಚಲಿಸುತ್ತದೆ. ಮತ್ತೆ ದೂರ ಚಲಿಸಿದಾಗ ವ್ಯಥೆ ಪಡುವವಳು ನೀನಾಗಬೇಡ. ನಿನಗೆ ಸಿಕ್ಕಿಲ್ಲ ಅಂತಾದ್ರೆ ಅದಕ್ಕಿಂತ ಅದ್ಭುತವಾದದ್ದು ನಿನಗೊಂದು ದಿನ ಸಿಗುತ್ತೆ ಅಂತರ್ಥ. ಮನೆಯಿಂದ ಹೊರಗೆ ಕಾಲಿಡುತ್ತಿದ್ದೀಯ. ಹೊರಗಿನಿಂದ ನಿನ್ನ ಬಳಿಗೆ ತಲುಪುವ ಸಂದೇಶಗಳು ಸಾವಿರವಿರುತ್ತದೆ. ಎಲ್ಲವೂ ನಿನ್ನ ಬದುಕನ್ನ ಬೆಳಗಿಸುವುದಕೆಂದೆ ಆಗಿರಬೇಕೆಂದೇನಿಲ್ಲ. ಅವರ ಬದುಕನ್ನ ಬೆಳಗಿಸಿ ಅವರು ಕ್ಷಣದ ತೃಪ್ತಿಯ ಅನುಭವಿಸಿ ನೆಮ್ಮದಿಯ ಉಸಿರಾಡಿ ಮಾಯವಾಗುತ್ತಾರೆ. ನೀನು ಕೊರಗಿ ನರಳಿ ಮೂಲೆಗುಂಪಾದರು ಗಮನಿಸುವವರಿಲ್ಲದ ಸ್ಥಿತಿಗೆ ನೀನು ತಲುಪಿ ಬಿಡ್ತೀಯ. ನಾನಿದ್ದೇನೆ ನಂಬಿಕೆ ಇಡು .ನಾವು ನಿನ್ನನ್ನ ಖಂಡಿತವಾಗಿಯೂ ನಂಬುತ್ತೇವೆ. ಕೊನೆಯವರೆಗೂ ಜೊತೆಯಾಗಿರ್ತೇವೆ. ಒಳ್ಳೆಯದಾಗಲಿ. ಮನಃಪೂರ್ತಿಯಾಗಿ ಬದುಕಿ ಬಿಡು. ಒಳ್ಳೆಯದಾಗುತ್ತದೆ..
ಅಪ್ಪನ ಮಾತಿನ ಆಶೀರ್ವಾದ ಪಡೆದು ಗುರುತಿಲ್ಲದ ಊರಿಗೆ ಬದುಕಿನ ಮುಂದಿನ ದಾರಿಗೆ ಹೊರಟಿದ್ದಾಳೆ. ಅಪ್ಪನ ಧೈರ್ಯದ ಮಾತುಗಳನ್ನ ಮತ್ತೆ ಮತ್ತೆ ನೆನಪಿಸಿಕೊಂಡು ಸಾಗುತ್ತಿದ್ದಾಳೆ. ಹಾದಿ ತಪ್ಪುವುದಿಲ್ಲವೆಂಬ ಭರವಸೆಯಿಂದ…
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ