ಸ್ಟೇಟಸ್ ಕತೆಗಳು (ಭಾಗ ೧೨೯೩) - ಅರ್ಥ ಮಾಡಿಕೋ

ಕಣ್ಣೀರು ಇಳಿಯುತ್ತಿದೆ. ಯಾವ ಕಾರಣಕ್ಕೆ ಯಾವ ಸಾಧನೆಗೆ, ಕೆಲವು ತಿಂಗಳ ಹಿಂದೆ ಪರಿಚಯವಾದವ ಈಗ ಮಾತು ಬಿಟ್ಟಿದ್ದಾನೆ, ತಿಳಿದುಕೊಂಡಿದ್ದಾನೆ, ಮೋಸ ಮಾಡಿದ್ದಾನೆ, ಇದ್ಯಾವುದೋ ಕಾರಣಗಳ ಪಟ್ಟಿಗಳನ್ನು ಹಿಡಿದುಕೊಂಡು ಕಣ್ಣೀರು ಇಳಿಯುತ್ತಿದೆ. ನಿನ್ನ ಇಲ್ಲಿಯ ಕಣ್ಣೀರಿಗೆ ಆತ ಅಲ್ಲೇನೂ ಬೆಲೆ ತೆರುತ್ತಾ ಇಲ್ಲ. ಆತನ ಜೀವನಕ್ಕಾಗಿ ನಿನ್ನ ಬಾಡಿದ ಮುಖ, ನೊಂದ ಕಣ್ಣುಗಳು, ಕಣ್ಣೀರನ್ನ ಮತ್ತೆ ಮತ್ತೆ ಕಾಣುತ್ತಿರುವ ಕೆನ್ನೆಗಳನ್ನ ಕಂಡು ಮನೆಯ ತಂದೆ ತಾಯಿಯ ಹೊಟ್ಟೆಗೆ ಊಟ ಸೇರುತ್ತಾ ಇಲ್ಲ. ನೀನು ನೋವಿನಿಂದ ಯಾತನೆ ಪಡುವುದನ್ನು ಕಂಡು ಅವರು ಮೌನವಾಗಿದ್ದಾರೆ. ಮಗಳ ಬಗ್ಗೆ ಮತ್ತೆ ಮತ್ತೆ ಯೋಚಿಸಿ ಕುಗ್ಗಿ ಹೋಗಿದ್ದಾರೆ. ಆರು ತಿಂಗಳ ಹಿಂದೆ ಪರಿಚಯವಾದ ಯಾವುದೋ ಗುರುತಿಲ್ಲದ ವ್ಯಕ್ತಿಗೆ ಕಣ್ಣೀರು ಸುರಿಸುವುದಕ್ಕಿಂತ, ಬದುಕು ಕೊಟ್ಟ ಮನೆಯವರು ಹೆಚ್ಚಲ್ಲವೇ, ಅವರ ನೆಮ್ಮದಿಯೇ ಜೀವನದ ದೊಡ್ಡ ಧ್ಯೇಯ ಅನ್ನೋದನ್ನು ಅರ್ಥ ಮಾಡಿಕೊಳ್ಳುವುದು ಯಾವಾಗ? ಬದುಕಿನ ಪರಿಚಯದಲ್ಲಿ ಹಾದುಹೋದ ಒಂದು ಪುಟಕ್ಕೋಸ್ಕರ ಇಡೀ ಬದುಕಿನ ಪುಸ್ತಕವನ್ನ ಸುಡಬೇಡ. ಹಾಗಾಗಿ ನಿನ್ನ ಕಣ್ಣೀರು ವ್ಯರ್ಥವಾಗಬಾರದು. ಸಮರ್ಥಳಾಗಿ ಬದುಕನ್ನ ಗಟ್ಟಿಗೊಳಿಸಬೇಕು. ಹಲವು ಪ್ರಶ್ನೆಗಳಿಗೆ ಉತ್ತರ ನೀಡಬೇಕು. ಬದುಕು ನಿನ್ನದು. ಹೀಗೆ ಬೋಧನೆಯ ಮಾತುಗಳನ್ನ ತನ್ನ ಮುಂದೆ ಕುಳಿತ ಪುಟ್ಟ ಮಗುವಿಗೆ ಅವನು ಹೇಳುತ್ತಿದ್ದ. ಬದಲಾವಣೆ ಮಗುವಿನೊಳಗಾಗಬೇಕು ಅನ್ನುವ ಕಾರಣಕ್ಕೆ…
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ