ಸ್ಟೇಟಸ್ ಕತೆಗಳು (ಭಾಗ ೧೨೯೪) - ಮುಂದೆ

ಸ್ಟೇಟಸ್ ಕತೆಗಳು (ಭಾಗ ೧೨೯೪) - ಮುಂದೆ

ಭಯವು ಬದುಕಿನ ಭಾಗವಾಗಿ ಬಿಟ್ಟಿದೆ ಅಂತ ನಿನಗೆ ಅನ್ನಿಸ್ತಾ ಇಲ್ವಾ. ಯಾಕೆಂದರೆ ನಿನ್ನ ನಂಬಿದವರು ನಿನ್ನ ಹಿಂದೆ ಹಲವರಿದ್ದಾರೆ. ನೀನೀಗ ಬದುಕುತ್ತಾ ಇರುವ ರೀತಿ ಇದು ಸದ್ಯದ ಮಟ್ಟಿಗೆ ನಿನ್ನನ್ನು ಉಸಿರಾಡುವಂತೆ ಮಾಡುತ್ತದೆ. ಆದರೆ ಇನ್ನು ಮುಂದೆ ಸಾಗ್ತಾ ಸಾಗ್ತಾ ಹೆಜ್ಜೆಗಳು ದೃಢವಾಗಿ ಬೇಕಾಗಬಹುದು. ಬೆನ್ನೆಲುಬಾಗಿ ನಿಲ್ಲುವುದಕ್ಕೆ ಶಕ್ತಿ ಸಾಕಾಗದೆ ಇರಬಹುದು, ಕನಸುಗಳನ್ನು ಈಡೇರಿಸಿಕೊಳ್ಳುವುದಕ್ಕೆ ಯೋಚನೆಗಳಿಗೆ ಹಿನ್ನಡೆ ಆಗಬಹುದು, ಮುಂದೆ ನಿನ್ನನ್ನ ನಂಬಿದವರು ಎಲ್ಲೋ ಒಂದು ಕಡೆ ಉಳಿದುಬಿಡುತ್ತಾರೆ. ನೀನು ಇವತ್ತಿಂದಲೇ ನಿನ್ನ ನಾಳೆಯ ಬಗ್ಗೆ ಯೋಚಿಸಲೇಬೇಕು. ನಿನ್ನ ಸಾಧ್ಯತೆಗಳ ಪಟ್ಟಿಯನ್ನೆಲ್ಲ ತಯಾರು ಮಾಡಿಕೊಂಡು ಹೆಜ್ಜೆಯನ್ನಿಡಬೇಕು, ಯಾವುದು ಸಾಧ್ಯ ಯಾವುದು ಅಸಾಧ್ಯ ಅನ್ನೋದನ್ನ ದೃಢಪಡಿಸಿಕೊಂಡು ಮುನ್ನುಗ್ಗಬೇಕು. ಏಕೆಂದರೆ ನಿನ್ನ ಬದುಕಿನ  ಸಾಧನೆ ಮೇಲೆ ಹಲವು ಕನಸುಗಳು ಗೂಡು ಕಟ್ಟಿಕೊಂಡು ಕಾಯುತ್ತಿವೆ. ನೀನು ಮಾಡುವ ಸಣ್ಣ ತಪ್ಪಿನಿಂದ ಅವರೆಲ್ಲರೂ ಎಲ್ಲಾ ಕನಸುಗಳನ್ನು ಸುಟ್ಟುಹಾಕಿ ತಲೆ ತಗ್ಗಿಸಿ ಬದುಕುವಂತಾಗಬಾರದು. ನೆನಪಿಟ್ಟುಕೋ, ಬದುಕು ನಿನ್ನೊಬ್ಬನದ್ದಲ್ಲ ನಿನ್ನ ನಂಬಿ ನಿನ್ನ ಜೊತೆಗಿರುವವರದ್ದು ಕೂಡ. ಹೀಗೆ ಹೇಳಿದ ನಾಗರಾಜ್ ಸರ್  ಬೆನ್ನನ್ನು ತಟ್ಟಿ ಮುಂದೆ ಹೋಗುವುದಕ್ಕೆ ಧೈರ್ಯ ತುಂಬಿದರು. ಹೋಗಬೇಕಾದದ್ದು ನನ್ನ ಜವಾಬ್ದಾರಿ ತಾನೇ?

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ