ಸ್ಟೇಟಸ್ ಕತೆಗಳು (ಭಾಗ ೧೨೯೬) - ಸರ್ಕಸ್

ಹಾರಬೇಕು ಕುಣಿಯಬೇಕು ಜಿಗಿಯಬೇಕು ಜೀವ ಪಣಕ್ಕಿಟ್ಟು ಆಟ ಆಡಲೇಬೇಕು. ನಮ್ಮ ಬದುಕು ಸಾಗಬೇಕು ಅಂತಾದರೆ ನಾವು ಹೀಗೆಲ್ಲ ಮಾಡ್ಲೇಬೇಕು. ನಮ್ಮದು ಈ ಊರಲ್ಲ ಸರ್. ನಮ್ಮ ಮೂಲ ಊರನ್ನೇ ಮರೆತುಬಿಟ್ಟಿದ್ದೇವೆ. ಒಂದೊಂದು ತಿಂಗಳು ಒಂದೊಂದೂರನ್ನ ದಾಟಿಕೊಂಡು ಹೊರಟಿದ್ದೇವೆ. ಅದ್ಭುತ ಕ್ಷಣಗಳನ್ನು ಕಳೆದುಕೊಂಡಿದ್ದೇವೆ. ಎಲ್ಲದಕ್ಕೂ ಒಗ್ಗಿ ಹೋಗಿದ್ದೇವೆ. ಹೊಸ ಆಲೋಚನೆಗಳಿಲ್ಲ. ಆ ದಿನ ಬದುಕಬೇಕು. ನಮ್ಮ ಮನೆಯ ಮಕ್ಕಳು ಈ ಪರಿಸ್ಥಿತಿಗೆ ಬರುವುದು ಬೇಡ ಅನ್ನೋದಷ್ಟೇ ನಮ್ಮ ಯೋಚನೆ. ಅಪ್ಪ ಹೀಗೆ ಯೋಚನೆ ಮಾಡಿಯೇ ಮಾಡಿ ಮಾಡಿ ನನ್ನನ್ನು ಇಲ್ಲಿಗೆ ಹಾಕಿ ಬಿಟ್ಟಿದ್ದ. ಆದರೆ ನಾನು ಹಾಗಾಗಬಾರದು ದೇಹ ದಂಡಿಸಿ ದುಡಿಯುತ್ತಿದ್ದೇನೆ. ಯಾವ ಕ್ಷಣದಲ್ಲಿ ಏನಾಗುವುದು ಎಂಬ ಭಯವಿದೆ ಆದರೆ ಬದುಕಿನ ಭಯಕ್ಕಿಂತ ಇದು ದೊಡ್ಡದಲ್ಲ, ಸಮಯವಾಯಿತು ಜನರನ್ನ ರಂಜಿಸಬೇಕು ಇಲ್ಲವಾದರೆ ನಮ್ಮ ಬದುಕು ರಂಜನೀಯವಾಗುವುದಿಲ್ಲ .ಹೀಗಂದ ರಮೇಶ ಸರ್ಕಸ್ ಟೆಂಟಿನ ಒಳಗೆ ನಡೆದುಬಿಟ್ಟ. ಆತ ಹಗ್ಗದ ಮೇಲೆ ಹಾರುತಿದ್ದ ಹಾರುತ್ತಾ ಹಾರುತ್ತಾ ಆತನ ಜೀವನದ ಕನಸುಗಳನ್ನು ಎತ್ತರಕ್ಕೇರಿಸುತ್ತಿದ್ದ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ