ಸ್ಟೇಟಸ್ ಕತೆಗಳು (ಭಾಗ ೧೨೯೭) - ಅಂಗಡಿಯೊಳಗೆ

ಸ್ಟೇಟಸ್ ಕತೆಗಳು (ಭಾಗ ೧೨೯೭) - ಅಂಗಡಿಯೊಳಗೆ

ಅವರು ಮೂಲೆಗುಂಪಾಗಿದ್ದಾರೆ, ಅವರಾಗಿಯೇ ಮಾಡಿಕೊಂಡಿದ್ದಲ್ಲ, ಸುತ್ತಲಿನವರು ಸೇರಿ ಅವರನ್ನು ದೂರ ತಳ್ಳುವುದಕ್ಕೆಆರಂಭ ಮಾಡಿದ್ದಾರೆ. ಅವರು ದುಡಿಯುವ ಅಂಗಡಿಯ ಮೇಲೆ ಜೀವಕ್ಕಿಂತಲೂ ಹೆಚ್ಚು ಪ್ರೀತಿ, ಹಗಲು ರಾತ್ರಿ ಎನ್ನದೆ ಆ ಅಂಗಡಿಯನ್ನ ಇನ್ನೊಂದಷ್ಟು ಎತ್ತರಕ್ಕೇರಿಸುವುದಕ್ಕೆ ಪ್ರತಿಕ್ಷಣವೂ ಯೋಚನೆ ಮಾಡುತ್ತಿದ್ದರು. ಒಂದು ದಿನವೂ ಸಮಯವನ್ನು ವ್ಯರ್ಥ ಮಾಡದೆ ಕೊಟ್ಟ ಕೆಲಸವನ್ನ ಚಾಚು ತಪ್ಪದೇ ಪೂರೈಸಿಕೊಂಡು ಅದ್ಭುತ ಯಶಸ್ವಿಗಾಗಿ ದುಡಿದವರು. ಕಾಲದ ಚಕ್ರಗಳು ಉರುಳಿದ ಹಾಗೆ ಹೊಸದಾಗಿ ಸೇರಿದ ಬಿಸಿ ರಕ್ತದ ಯುವ ಮನಸುಗಳು ತಲೆ ಹಣ್ಣಾಗಿರುವ ಪ್ರೌಢ ವಯಸ್ಸಿನ ಅವರನ್ನು ದೂರ ತಳ್ಳುವುದಕ್ಕೆ ಕಾರಣವನ್ನು ಹುಡುಕಿದರು. ಅವರ ಕೆಲಸ ಇವರಿಗೆ ನಗೆ ಪಾಟಲಿಗೆ ಕಾರಣವಾಯಿತು. ಹಿಂದಿನಿಂದ ಹಾಸ್ಯದ ವಸ್ತುವನ್ನಾಗಿ ಮಾಡಿಕೊಂಡರು. ತಾವೇನು ಅದ್ಭುತವನ್ನು ಸಾಧಿಸುತ್ತಿದ್ದೇವೆ ಎನ್ನುವ ಅಹಂನಲ್ಲಿ ಬದುಕುವುದಕ್ಕೆ ಆರಂಭ ಮಾಡಿದರು. ಆ ಹಿರಿಯ ಜೀವ ಪ್ರತಿದಿನವೂ ನೋವು ತಿನ್ನುತ್ತಿತ್ತು ಯಾರೇನೇ ಮಾಡಿದ್ರೂ ತನ್ನದೇನಾದರೂ ತಪ್ಪಿದಿಯಾ ಅಂತ ಪ್ರತಿದಿನವೂ ಹಿರಿಯ ಜೀವ ಯೋಚಿಸಿ ಯೋಚಿಸಿ ಕುಗ್ಗುತ್ತಿತ್ತು.ಅಂಗಡಿ ಬೆಳೆಯುತ್ತಾ ಬೆಳೆಯುತ್ತಾ ಹೋದ ಹಾಗೆ ಒಳಗಿದ್ದವರು ಅನುಭವಿಸಿದ ನೋವಿನ ಕಣ್ಣೀರು ಅಂಗಡಿಯ ಯಶಸ್ಸಿನ ಮೇಲೆ ಪರಿಣಾಮ ಬೀರಬಹುದೋ. ಮುಖದಲ್ಲಿ ನಗು ತುಂಬಿ ಕಣ್ಣಲ್ಲಿ ಕಣ್ಣು ನೀರು ತುಂಬಿಕೊಂಡು ಪ್ರತಿದಿನವೂ ಆ ಹಿರಿಯ ಜೀವ ಅಂಗಡಿಯ ಒಳಗೆ ಓಡಾಡುತ್ತಾನೆ ಇದೆ. ಪರಿಣಾಮ ಹಿರಿಯ ಜೀವಕ್ಕೋ ದೊಡ್ಡ ಅಂಗಡಿಗೋ ತಿಳಿದಿಲ್ಲ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ