ಸ್ಟೇಟಸ್ ಕತೆಗಳು (ಭಾಗ ೧೨೯೮) - ಕೇಳಿಬಿಡು

ತಲೆಗೆ ಯಾರೋ ಜೋರಾಗಿ ಮೊಟಕಿದರು. ಯಾರೆಂದು ನೋಡಿದ್ರೆ ನನ್ನ ಪರಿಚಯದವರಲ್ಲ, ಆದರೆ ಅವರನ್ನು ಈ ಮೊದಲು ಎಲ್ಲೋ ನೋಡಿದ್ದೇನೆ. ನನ್ನ ಮನಸ್ಸು ಒಂದಷ್ಟು ಗೊಂದಲಗಳಿಗೆ ಬಿದ್ದಾಗ, ಈ ಕಷ್ಟಗಳು ಪರಿಹಾರ ಆಗುತ್ತೋ ಇಲ್ವೋ ಅಂದುಕೊಂಡಾಗ, ನೋವಿನಿಂದ ಮೌನವಾದಾಗ, ಅವರು ನನ್ನ ಹತ್ತಿರ ಬಂದು ಮಾತನಾಡಿ ಸಮಾಧಾನ ಹೇಳಿ ಹೋಗ್ತಾ ಇದ್ರು. ಇವತ್ತು ಬಂದ ಕಾರಣವೇನು ಅಂತ ಗೊತ್ತಿಲ್ಲ ಅವರು ಮಾತಾಡುವವರು ಈ ಸಲವು ಮಾತು ಮುಂದುವರಿಸಿದರು. ನೋಡು ನಿನಗೆ ಏನಾದರೂ ಬೇಕಾದರೆ ಯಾರ ಬಳಿ ಸಿಗಬೇಕೋ ಅವರ ಬಳಿ ಕೇಳಿ ಪಡೆದುಕೊಂಡು ಬಿಡು. ನೀನು ಕೇಳದೆ ಸುಮ್ಮನಾಗಿದ್ದು ಅವರು ಕೊಡುತ್ತಾರೆ ಅವರಿಂದ ನಿನಗದು ಸಿಗುತ್ತದೆ ಎನ್ನುವ ಭ್ರಮೆಯಲ್ಲಿ ದಿನ ದೂಡಿ ಒಂದಷ್ಟು ಸಮಸ್ಯೆಗಳನ್ನ ತಂದುಕೊಳ್ತಿಯಾ, ಮತ್ತೆ ಮತ್ತೆ ನೋವನ್ನು ಅನುಭವಿಸ್ತೀಯಾ. ಅವರು ನೀಡುವುದಿಲ್ಲ ಎನ್ನುವುದು ಖಚಿತವಾದರೆ ಹೊಸ ದಾರಿ ಹುಡುಕಬಹುದು, ಹೊಸ ಆಲೋಚನೆ ಮಾಡಬಹುದು. ಮೌನವಾಗಿದ್ದು ತೊಂದರೆ ಅನುಭವಿಸುವುದಕ್ಕಿಂತ ಮಾತನಾಡಿ ಪರಿಹಾರ ಕಂಡುಕೊಳ್ಳುವುದೇ ಲೇಸಲ್ಲವೇ? ಹಾಗಾಗಿ ನೇರವಾಗಿ ಕೇಳಿ ಬಿಡು ಸಿಗುವುದು ಸಿಗುವುದಿಲ್ಲವೋ ಕ್ಷಣದಲ್ಲಿ ತಿಳಿದುಬಿಡುತ್ತದೆ. ನಿನ್ನ ಸಮಯ ಉಳಿಯುತ್ತದೆ ಸಾಗುವ ದಾರಿ ಸುಲಭವಾಗುತ್ತದೆ .ಹೀಗಂದವರು ಮತ್ತೊಮ್ಮೆ ಬೆನ್ನು ತಟ್ಟಿ ನಡೆದುಬಿಟ್ಟರು. ಹೇಳಿದ್ದನ್ನ ಮನಸ್ಸಿನೊಳಗಿಳಿಸಿಕೊಂಡೇ ಮತ್ತೆಂದು ಅವರನ್ನು ಭೇಟಿಯಾಗುವೆನು ಎನ್ನುವ ಯೋಚನೆಯಲ್ಲಿ ಅಲ್ಲೇ ಉಳಿದುಕೊಂಡೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ