ಸ್ಟೇಟಸ್ ಕತೆಗಳು (ಭಾಗ ೧೨೯) - ವಿದಾಯ

ಸ್ಟೇಟಸ್ ಕತೆಗಳು (ಭಾಗ ೧೨೯) - ವಿದಾಯ

ಮನೆಯವರು ನಡೆಯಬೇಕಿತ್ತು ಮಸಣದೆಡೆಗೆ. ಜವಾಬ್ದಾರಿಗೆ ಹೆಗಲು ಕೊಟ್ಟು, ಹೊಟ್ಟೆಗೆ ಅನ್ನ ನೀಡಲು ದುಡಿಯುತಿದ್ದ ಅಪ್ಪ ಉಸಿರ ನಿಲ್ಲಿಸಿದ್ದ. ಹೊರಗಿನ ಕೋಣೆಯಲ್ಲಿ ನಿಶ್ಚಲವಾಗಿತ್ತು ದೇಹ. ದಿನವೂ ಮಲಗುವ ಜಾಗದಲ್ಲೇ. ಮನೆಯಲ್ಲಿ ಅಳುವಿನ ಸ್ವರ ಏರುಗತಿಯಲ್ಲಿತ್ತು, ಸೇರಿದ್ದ ಜನರ ಹಾಗೆ. ನಿಜವೊ, ನಟನೆಯೂ ಅಪ್ಪನ ಆತ್ಮಕ್ಕೆ ಮಾತ್ರ ಗೊತ್ತು. ಹೊರಗಿನಿಂದ ನಾ ಕಂಡ ಹಾಗೆ ನೋವಿನ ಸಾವು ಅಪ್ಪನದಾಗಿತ್ತು. ಮನೆ ಮನಗಳು ತುಂಡಾಗಿತ್ತು. ಜೋಡಿಸಲು ಸಾಧ್ಯವೇ ಇಲ್ಲದಷ್ಟು. ಕೊರಗಿನಲ್ಲಿ ಉಸಿರು ಪರಮಾತ್ಮನ ಪಾದ ಸೇರಿತ್ತು. ನೆಮ್ಮದಿಯ ಊಟ, ಪ್ರೀತಿಯ ಮಾತು, ನಿರ್ಧಾರಗಳಿಗೆ ಒಪ್ಪಿಗೆ ಯಾವುದೂ ಸಿಗದಿದ್ದಾಗ ಒದ್ದಾಡಿದ  ದೇಹ ನಿಶ್ಚಲವಾಗಿತ್ತು ."ದೇಹ ಬಿಸಿ ಇದ್ದಾಗ ತಿರಸ್ಕರಿಸಿ ತಣ್ಣಗಾದಾಗ ಅಪ್ಪಿ ಮುದ್ದಾಡಿ ಗೋಳಾಡಿದರೆ ಏನು ಬಂತು" ಅಪ್ಪ ಚಲಿಸಾಗಿತ್ತು. ಕುಟುಂಬದ ಹೆಜ್ಜೆ ಮಸಣದೆಡೆಗೆ. ಜೀವನ ನಶ್ವರತೆಯ ಅರಿವನ್ನು ಮಸಣ ಬೋಧಿಸುತ್ತಲೇ ಇತ್ತು, ಆದರೆ ಕೇಳುವ ಕಿವಿಗಳು ಅಲ್ಲಿರಲಿಲ್ಲ. ನಗುತ್ತಿತ್ತು ಮಸಣ ಜೊತೆಗೆ ಅಪ್ಪನ ಆತ್ಮವೂ ಕೂಡ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ