ಸ್ಟೇಟಸ್ ಕತೆಗಳು (ಭಾಗ ೧೩೦೪) - ಬೆಕ್ಕಿನ ಪಾಠ

ಮನೆಯ ಅಂಗಳದಲ್ಲಿ ಎರಡು ಬೆಕ್ಕುಗಳು ಬದುಕುತ್ತಿವೆ. ಮೊದಲನೆಯ ಬೆಕ್ಕು ಹಾಕಿದ್ದನ್ನು ತಿಂದುಕೊಂಡು, ಪ್ರತಿದಿನದ ದಿನಚರಿಯನ್ನಷ್ಟೇ ಮಾಡ್ತಾ ಇದೆ. ಮಲಗುವುದು, ಏಳುವುದು, ಓಡಾಟ, ತಿಂಡಿ ಮತ್ತೆ ನಿದ್ರೆ ಇದನ್ನೇ ಮುಂದುವರೆಸಿಕೊಂಡು ದಿನವನ್ನು ದೂಡುತ್ತಿದೆ. ಅದರ ಜೊತೆಗೆ ಬದುಕುತ್ತಿರುವ ಇನ್ನೊಂದು ಬೆಕ್ಕು ಪ್ರತಿದಿನದ ದಿನಚರಿಯ ಜೊತೆಗೆ ಹೊಸತನ್ನು ಹುಡುಕುತ್ತಿದೆ. ಮರವನ್ನು ಏರುವುದು, ಹಾರುವುದು, ಹೊಸ ಜಾಗದ ಹುಡುಕಾಟ, ಉತ್ಸಾಹವನ್ನು ಮೈಗೇರಿಸಿಕೊಂಡು ಸಂಭ್ರಮದ ಹಾರಾಟ, ಹೀಗೆ ಚೈತನ್ಯವನ್ನು ತುಂಬಿಕೊಂಡು ಬದುಕುತ್ತಿದೆ. ಆ ಎರಡೂ ಬೆಕ್ಕನ್ನು ಕಂಡರೂ ಆ ಮನೆಯ ಹುಡುಗನಿಗೆ ತಾನು ಏನಾಗಬೇಕು ಅನ್ನೋದರ ಅರಿವು ಇನ್ನೂ ತಲೆಯೊಳಗೆ ಹೊಕ್ಕಿಲ್ಲ. ಹೊಸತನದ ಕಡೆಗೆ ತುಡಿಯುವ ಹೊಸ ವಿಚಾರ ಕಲಿಯುವ ವ್ಯಕ್ತಿಯಾಗಬೇಕೋ ಅಥವಾ ದಿನದ ದಿನಚರಿಯನ್ನಷ್ಟೇ ಮಾಡ್ತಾ ಅಲ್ಲೇ ಮೂಲೆಗೆ ಒರಗಿ ಬಿಡಬೇಕೋ. ಅವನ ನಿರ್ಧಾರ ಕಣ್ಣ ಮುಂದೆ ಕಂಡರೂ ಕೂಡ ಅತ ಬದಲಾಗದಿರುವುದು ವಿಪರ್ಯಾಸವಲ್ಲದೆ ಮತ್ತೇನು? ಮನೆಯ ಯಜಮಾನ ರಾಜಾರಾಮರಿಗೆ ಏನು ಮಾಡುವುದು ತಿಳಿಯದಾಗಿದೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ