ಸ್ಟೇಟಸ್ ಕತೆಗಳು (ಭಾಗ ೧೩೦೬) - ಕೈಗಳು ಹೇಳಿವೆ

ಸ್ಟೇಟಸ್ ಕತೆಗಳು (ಭಾಗ ೧೩೦೬) - ಕೈಗಳು ಹೇಳಿವೆ

ನನಗೆ ವ್ಯವಧಾನವಿಲ್ಲ ಗೆಳೆಯಾ... ನನ್ನ ಸುತ್ತ ಇವತ್ತು ಕಂಡ ಕೈಗಳನ್ನ ಗಮನಿಸದೇ ಹೋದೆನಲ್ಲಾ... ಗಟ್ಟಿ ಮುಷ್ಟಿಯೊಳಗೆ ಹಿಡಿದ ಹತ್ತು ರುಪಾಯಿಯ ಕೈಗಳಲ್ಲಿ ಇದೂ ಖಾಲಿಯಾಗಿಬಿಟ್ಟರೆ ಮುಂದೇನು ಅನ್ನುವ ಭಯವಿತ್ತು, ಭಾರ ಕೆಂಪು ಕಲ್ಲನ್ನ ಎತ್ತಿರುವ ಕೈಗಳಲ್ಲಿ ನಂಬಿಕೆ ಜೊತೆಯಾಗಿತ್ತು ದೂರದೂರಿನವರೆಗೆ ನಂಬಿದವರನ್ನ ನಡೆಸುವ ಧೈರ್ಯವಿತ್ತು, ದಾರಿಯಲ್ಲಿ ಕೈ ಹಿಡಿದು ನಡೆದಿದ್ದ ಮುದ್ದಿನ‌ ಪ್ರೇಮಿಗಳ ಕೈಯೊಳಗೆ ಹುಸಿ ಭರವಸೆ ನಲಿದಿತ್ತು, ದಾರಿಯಲ್ಲಿ ಹಣ್ಣು ಮಾರುತ್ತಿದ್ದ ಪುಟ್ಟ ಹುಡುಗನ ಅಂಗೈಯಲ್ಲಿ  ಕಾಯುವಿಕೆ ಕಾಣುತ್ತಿತ್ತು, ಬೇಡಲು ನಿಂತ ಕೈಗಳು ದೈನ್ಯತೆಯನ್ನ ಸಾರಿ ಹೇಳುತ್ತಿತ್ತು, ಕೈ ಮುಗಿದು ನಿಂತವರಲ್ಲಿ ಪ್ರಾರ್ಥನೆಯೇ ಉಸಿರಾಡುತ್ತಿತ್ತು, ಅಂಗಡಿಯಲ್ಲಿ ಬಾಕಿ ಕೊಡಲು ಕಾಯುತ್ತಿದ್ದ ಅಣ್ಣನ ಅಂಗೈಯಲ್ಲಿ ಪ್ರಾಮಣಿಕತೆ ಇತ್ತು, ಮಗುವಿನ ಕೈ ಹಿಡಿದು ರಸ್ತೆ ದಾಟಿಸುತ್ತಿದ್ದ ಅಮ್ಮನ ಅಂಗೈಯಲ್ಲಿ ಮಮತೆ ಇತ್ತು, ಆಂಬುಲೆನ್ಸ್ ಜೋರಾಗಿ ಓಡಿಸುತ್ತಿದ್ದವನ ಕೈಗಳಲ್ಲಿ ಧೈರ್ಯವಿತ್ತು.. ಹೀಗೆ ಎಲ್ಲವೂ ಅಂಗೈಯಲ್ಲಿ ಕಾಣುತ್ತಿರುವಾಗ ನಾನು ಅದ್ಯಾವುದನ್ನ ಗಮನಿಸದೇ ನನ್ನದೇ‌ ನಿರ್ಧಾರಗಳ ಮಹಲಿನೊಳಗೆ ಕುಳಿತಿದ್ದೆ, ನಾನು ನನ್ನ ಅಂಗೈಗಳಿಗೆ ಭಾವನೆ ನೀಡಿ ಒಳ್ಳೆಯನಾಗುವ ಅವಕಾಶದಿಂದ ವಂಚಿತನಾದೆ. ಎಲ್ಲದಕ್ಕೂ ವ್ಯವದಾನ‌ ಬೇಕಿತ್ತು ಗೆಳೆಯಾ ... ತಪ್ಪು ಮಾಡಿಬಿಟ್ಟೆ ನೀನು ಈ ತಪ್ಪು ಮಾಡಬೇಡ...

ಹೀಗೆ ಗೆಳೆಯ ಚಿದಂಬರ ಬರೆದ ಪತ್ರ ನನ್ನ ಓದಿನ ಪುಸ್ತಕದ ನಡುವೆ ಸಿಕ್ಕಿತು. ಅದನ್ನ ಅಳವಡಿಸಿಕೊಳ್ಳಬೇಕೆಂದಿದ್ದೇನೆ ಒಳ್ಳೆಯದು ಸಿಗುವಾಗ ಯಾಕೆ ಬಿಡೋದು?

.-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ