ಸ್ಟೇಟಸ್ ಕತೆಗಳು (ಭಾಗ ೧೩೦೭) - ವಿಷ

ನದಿ ನೀರನ್ನ ಕುಡಿದವರೆಲ್ಲಾ ಸಾಯುತ್ತಿದ್ದಾರೆ, ಸುದ್ದಿ ಹರಿದಾಡಿತು, ವಿಷಯ ನಿಜವಾಗಿತ್ತು. ಎಲ್ಲರೂ ನದಿಗೆ ತೆಗಳುವವರೇ, ಬೈಯುವವರೇ ಹೆಚ್ಚಾಗಿದ್ದಾರೆ, ಆದ್ರೆ ಒಬ್ಬರೂ ಕೂಡ ನದಿಗೆ ವಿಷವನ್ನು ಹಾಕುತ್ತಿರುವವರ ಬಗ್ಗೆ ಯೋಚನೆ ಮಾಡ್ತಾ ಇಲ್ಲ. ನದಿಯಿಂದಾಗಿ ಸಮಸ್ಯೆಗಳು ಉದ್ಭವಿಸಿದೆ ಎಂದು ಘಂಟಾಘೋಷವಾಗಿ ಘೋಷಣೆಗಳನ್ನು ಹೊರಡಿಸಿದ್ದಾರೆ. ಆ ನದಿಗಿಂತ ಸ್ವಲ್ಪ ದೂರದಲ್ಲಿ ಇನ್ನೊಂದು ನದಿಯು ಹರಿಯುತ್ತಾ ಇದೆ. ಆ ನದಿಯಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಎಲ್ಲರೂ ನದಿಯನ್ನು ಹೊಗಳುವರೇ. ಆದರೆ ಆ ನದಿಯ ಸುತ್ತಮುತ್ತ ಬದುಕುತ್ತಾ ಇರುವವರು ನದಿಗೆ ವಿಷವನ್ನು ಹಾಕದೆ ಇರುವ ಕಾರಣ ಆ ನದಿ ಇನ್ನು ಮಲಿನವಾಗದೆ ಉಳಿದುಕೊಂಡಿದೆ. ನದಿ ಹುಟ್ಟಿನಿಂದ ತಾನು ತಲುಪುವವರೆಗೂ ಸುಲಲಿತವಾಗಿ ಏರು ತಗ್ಗುಗಳನ್ನು ಅನುಭವಿಸಿಕೊಂಡು ಸಾಗಿ ಸಮುದ್ರವನ್ನು ಸೇರುತ್ತದೆ. ನದಿಯ ಜೊತೆಗೆ ಬದುಕುತ್ತಿರುವವರು ನದಿಗೇನು ಸೇರಿಸುತ್ತಿದ್ದಾರೆ ಅನ್ನೋದು ಮುಖ್ಯ. ಹಾಗಾಗಿ ನದಿಯಿಂದ ಸಾವು ನೋವುಗಳು ಸಂಭವಿಸಬಹುದು ಅಥವಾ ಬದುಕು ಅದ್ಭುತವಾಗಿ ಬದಲಾಗಬಹುದು. ಎಲ್ಲದಕ್ಕೂ ಕಾರಣ ನದಿಯಲ್ಲ, ನದಿಯನ್ನ ನಂಬಿ ಬಳಸುತ್ತಿರುವವರು ಯಾರು ನದಿಗೆ ವಿಷ ಸೇರಿಸುತ್ತಿದ್ದಾರೋ ಅವರು ಹರಿವಿಗೆ ವಿರುದ್ದ ದಿಕದಕಿನಲ್ಲಿ ನಿಂತು ವಿಷ ನೀಡಿದ್ದಾರೆ, ಅವರಿಗೇನೂ ಆಗಬಾರದೆಂದು ಅರ್ಥವಾಯಿತಾ...ಮಕ್ಕಳೇ..
ಹೀಗೆ ತರಗತಿಯಲ್ಲಿ ಮೇಷ್ಟ್ರು ಮಕ್ಕಳಿಗೆ ಕೇಳಿದಾಗ, ಅವರಿಗೆ ವಿಷಯ ಅರ್ಥವಾಗಿತ್ತು. ಆದರೆ ಅದರ ಮೂಲಕ ಹೇಳೋ ಹೊರಟಿದ್ದ ಸಂದೇಶ ಸರಿಯಾಗಿ ಅರ್ಥ ಆಗಲಿಲ್ಲ. ಮಕ್ಕಳಿನ್ನೂ ಸಣ್ಣವರು ದೊಡ್ಡವರಾದಾಗ ಅದು ಕೂಡ ಮಕ್ಕಳ ಮನಸ್ಸಿಗೆ ಖಂಡಿತವಾಗಿಯೂ ಅರ್ಥವಾಗುತ್ತದೆ ಅನ್ನೋದು ಮೇಷ್ಟ್ರಿಗೂ ಗೊತ್ತಿತ್ತು. ತರಗತಿಯ ಗಂಟೆ ಮೊಳಗಿದ ನಂತರ ಮೇಷ್ಟ್ರು ತರಗತಿ ಮುಗಿಸಿ ತೆರಳಿ ಬಿಟ್ಟರು...ಮಕ್ಕಳು ಯೋಚಿಸಲಾರಂಬಿಸಿದರು.
.-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ