ಸ್ಟೇಟಸ್ ಕತೆಗಳು (ಭಾಗ ೧೩೦೮) - ಕಾರಣದಂಗಡಿ

ಹೊಸತೊಂದು ಅಂಗಡಿ ತೆರೆದಿದ್ದಾರೆ. ನೀವಿಲ್ಲಿಯವರೆಗೆ ಆ ತರಹದ ಅಂಗಡಿ ನೋಡಿರಲಿಕ್ಕಿಲ್ಲ, ವಿಶೇಷವಾಗಿದೆ. ಅಗತ್ಯ ಬಿದ್ದರೆ ಮಾತ್ರ ಅಂಗಡಿಯೊಳಗೆ ಪ್ರವೇಶ. ಸುಮ್ಮನೆ ಕುಳಿತು ಹರಟೆ ಹೊಡೆಯಲು ಅವಾಕಾಶವಿಲ್ಲ. ಅಲ್ಲಿ ದೊಡ್ಡ ನಾಮಫಲಕ ತೂಗುಹಾಕಿದ್ದಾರೆ. ಇಲ್ಲಿ ಕಾರಣ ಹುಡುಕಿ ಕೊಡಲಾಗುವುದು. ಬದುಕಿಗೆ ಮಾತ್ರ.
ಈ ಅಂಗಡಿಯೊಳಗೆ ಬದುಕುವುದ್ದಕ್ಕೆ ಕಾರಣಗಳನ್ನ ಹುಡುಕಿಕೊಡಲಾಗುವುದು. ಕೆಲವರು ಸಾಯಲು ಕಾರಣಗಳನ್ನ ಹುಡುಕುತ್ತಾರೆ. ಬದುಕಲು ಕಾರಣಗಳು ರಾಶಿ ಇರುವಾಗ ಅದನ್ನ ಹುಡುಕಲು ಮರೆತಿರುತ್ತಾರೆ. ಕೆಲವೊಂದು ಸಲ ನೆನಪಾಗುವುದಿಲ್ಲ. ಅಂಥವರಿಗೆ ಈ ಅಂಗಡಿ ಸದಾ ತೆರೆದಿರುತ್ತದೆ. ಕಾರಣಗಳ ದೊಡ್ಡ ರಾಶಿಯನ್ನ ಹಿಡಿದು ಕಾಯುತ್ತಿದ್ದಾರೆ. ಸಣ್ಣ ವಯಸ್ಸಿನಲ್ಲಿಯೂ ಸಾಯುವುದಕ್ಕೆ ಕಾರಣಗಳನ್ನ ಸುಲಭವಾಗಿ ಹುಡುಕುತ್ತಾರೆ, ಅಂಥವರು ಒಮ್ಮೆ ಈ ಅಂಗಡಿಯೊಳಗೆ ಪ್ರವೇಶಿದರೆ ಅಲ್ಲಿ ಬದುಕುವುದ್ದಕ್ಕೆ ಕಾರಣಗಳನ್ನ ತಿಳಿಸಿಕೊಟ್ಟು ಸಾಯುವ ಯೋಚನೆ ದೂರ ಮಾಡುತ್ತಾರೆ. ಇದು ಸದ್ಯದ ತುರ್ತು ಆಗಿರುವ ಕಾರಣ ಈ ಅಂಗಡಿ ತೆರೆಯಲಾಗಿದೆ. ಅದರ ಯಜಮಾನರು ತಮ್ನ ಮಗನನ್ನ ಕೆಲವು ದಿನಗಳ ಹಿಂದೆ ಮೊಬೈಲ್ ಕಸಿದುಕೊಂಡ ಕಾರಣ ಆತ್ಮಹತ್ಯೆ ಮಾಡಿಕೊಂಡದ್ದನ್ನ ಗಮನಿಸಿದ್ದಾರೆ. ಆ ನಿಟ್ಟಿನಲ್ಲಿ ಅಂಗಡಿ ತೆರೆದಿದ್ದಾರೆ. ಅಗತ್ಯವಿದ್ದವರು ಬನ್ನಿ, ಯಾರಿಗಾದರೂ ಅಗತ್ಯವಿದ್ದರೆ ವಿಳಾಸ ತಿಳಿಸಿಬಿಡಿ. ಬದುಕುವುದ್ದಕ್ಜೆ ಕಾರಣಗಳನ್ನ ಹುಡುಕಿಕೊಳ್ಳಲೇ ಬೇಕಲ್ಲವೇ... ಅಂಗಡಿಯ ಮುಂದೆ ದಿನದಿಂದ ದಿನಕ್ಕೆ ಸರತಿ ಸಾಲು ಬೆಳೆಯುತ್ತಿದೆ. ನಿಮ್ಮೂರಲ್ಲೂ ಅಂಗಡಿ ತೆರೆಯುವ ಯೋಚನೆ ಮಾಡಿ ಅಗತ್ಯವಿದ್ದರೆ…
.-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ